ಮಂಗಳೂರು: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡ ಹಿನ್ನಲೆಯಲ್ಲಿ ಆತನ ಅಂಗಾಂಗಗಳನ್ನು ದಾನ ಮಾಡಿ ಕುಟುಂಬಸ್ಥರು ಸಾವಿನಲ್ಲೂ ಸಾರ್ಥಕತೆ ಮೆರೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ.
ಯಶರಾಜ್ (16) ಮೃತ ದುರ್ದೈವಿ. ಚಲಿಸುತ್ತಿದ್ದ ಸಿಟಿ ಬಸ್ ನಿಂದ ಎಸೆಯಲ್ಪಟ್ಟು ಯಶರಾಜ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಪಕಾರಿಯಾಗದೇ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡಿತ್ತು.
ಮೃತ ಬಾಲಕ ಯಶರಾಜ್, ಉಳ್ಳಾಲ ಮಾಸ್ತಿಕಟ್ಟೆ ಬೈದರಪಾಲು ನಿವಾಸಿ ತ್ಯಾಗರಾಜ್ ಮತ್ತು ಮಮತಾ ಕರ್ಕೇರ ದಂಪತಿಯ ಪುತ್ರನಾಗಿದ್ದು, ಯಶರಾಜ್ ನಗರದ ಎಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ದರ್ಜೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ. ಸೆಪ್ಟೆಂಬರ್ 7 ರಂದು ಬೆಳಗ್ಗೆ ಯಶರಾಜ್ ಮಾಸ್ತಿಕಟ್ಟೆಯಿಂದ ಸಿಟಿ ಬಸ್ನಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಅಡಂ ಕುದ್ರುವಿನಲ್ಲಿ ಬಸ್ ನಿಂದ ಹೊರಗೆ ಎಸೆಯಲ್ಪಟ್ಟಿದ್ದ.
ಹೀಗಾಗಿ ವಿದ್ಯಾರ್ಥಿ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಯಶರಾಜ್ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಯಶರಾಜ್ ಮೆದಳು ನಿಷ್ಕ್ರಿಯ ಗೊಂಡಿತ್ತು. ದುಃಖದ ಮಡುವಿನಲ್ಲಿದ್ದ ಕುಟುಂಬಸ್ಥರು ವೈದ್ಯರ ಸಲಹೆ ಮೇರೆಗೆ ಯಶರಾಜ್ ಅಂಗಾಂಗಗಳನ್ನು ದಾನ ಮಾಡಿ ಹಲವರ ಜೀವನಕ್ಕೆ ಮರುಜೀವ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಮೃತ ವಿದ್ಯಾರ್ಥಿ ಯಶರಾಜ್ ಕುಟುಂಬಸ್ಥರು ದೂರು ನೀಡಿದ್ದಾರೆ. ಇನ್ನು ಐಪಿಸಿ ಸೆಕ್ಷನ್ 304 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಸ್ಸಿನ ಚಾಲಕ ಕಾರ್ತಿಕ್ ಶೆಟ್ಟಿ ಹಾಗೂ ನಿರ್ವಾಹಕ ದಂಶೀರ್ನನ್ನು ಪೊಲೀಸರು ಬಂಧಿಸಿದ್ದಾರೆ.