ನವದೆಹಲಿ: ಕರ್ನಾಟಕದ ಶಾಲಾ ಕಾಲೇಜುಗಳ ತರಗತಿಯೊಳಗೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ನಿಷೇಧಿಸಿ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಇಂದು ಪ್ರಕಟಿಸಿದೆ. ಇಬ್ಬರು ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು ಹೊರಬಿದ್ದಿದೆ. ಹೀಗಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ಪೀಠದಿಂದ ಅಂತಿಮ ತೀರ್ಪು ಹೊರಬೀಳಲಿದೆ.
ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು, ಮೇಲ್ಮನವಿ ಅರ್ಜಿಯ ವಜಾ ಪರ ತೀರ್ಪು ನೀಡಿದ್ದರೆ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಕರ್ನಾಟಕ ಹೈಕೋರ್ಟ್ ಆದೇಶವನ್ನು ರದ್ದು ಮಾಡುವ ಪರವಾಗಿ ತೀರ್ಪು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣವು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಅವರ ಮುಂದೆ ಬರಲಿದೆ. ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆಯಾಗಿದೆ. ಅಲ್ಲಿಯವರೆಗೆ ಹಿಜಾಬ್ ವಿಚಾರದಲ್ಲಿ ಯಥಾಸ್ಥಿತಿ ಮುಂದುವರಿಯಲಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಬ್ಯಾನ್ ಕುರಿತ ಕರ್ನಾಟಕ ಹೈಕೋಟ್ನ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ವಜಾಗೊಳಿಗೊಳಿಸಿ ತೀರ್ಪು ನೀಡಿದರು. ಇನ್ನು ನ್ಯಾಯಮೂರ್ತಿ ಧುಲಿಯಾ ಅವರು, ಅಗತ್ಯ ಧಾರ್ಮಿಕ ಆಚರಣೆ ಕುರಿತು ವಿವಾದದ ಎಬ್ಬಿಸುವ ಅಗತ್ಯ ಇರಲಿಲ್ಲ ಎಂದು ಹೈಕೋರ್ಟ್ ಆದೇಶದ ವಿರುದ್ಧ ಅಭಿಪ್ರಾಯಪಟ್ಟಿದ್ದಾರೆ.
ಸೆಪ್ಟೆಂಬರ್ 22ರಂದು ಪ್ರಕರಣದ ಕೊನೆಯ ದಿನದ ವಿಚಾರಣೆ ನಡೆದು, ವಾದ – ಪ್ರತಿವಾದ ಪೂರ್ಣಗೊಂಡ ಬಳಿಕ ಸುಪ್ರೀಂ ಕೋರ್ಟ್ನ ದ್ವಿಸದಸ್ಯ ಪೀಠ ತನ್ನ ತೀರ್ಪು ಇಂದಿಗೆ ಕಾಯ್ದಿರಿಸಿತ್ತು.
ಸುಪ್ರೀಂಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವೇಳೆ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ತಡೆ ಹಿಡಿಯುವಂತೆ ಕೋರಲಾಗಿತ್ತು. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡದಿದ್ದರೆ ಅವರು ಶಾಲೆಗೆ ತೆರಳದೇ ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಹೀಗಾಗಿ ಶಾಲೆಯಲ್ಲೂ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಫಿರ್ಯಾದುದಾರರ ಪರ ವಕೀಲರು ವಾದ ಮಂಡಿಸಿದ್ದರು. ಇದಲ್ಲದೇ ಈ ಬಿಕ್ಕಟ್ಟನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು ಎಂದು ವಾದಿಸಿದ್ದರು