ಮಂಗಳೂರು: ಚಿನ್ನದ ಫೈನಾನ್ಸ್ ಕಂಪನಿಯಲ್ಲಿ ನಕಲಿ ಚಿನ್ನಾಭರಣಗಳನ್ನು ಒತ್ತೆ ಇಟ್ಟು ಸಾಲ ಪಡೆದು ವಂಚನೆ ಮಾಡಿರುವ ದಂಪತಿ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿಗಳನ್ನು ಮಂಕಿ ಸ್ಟ್ಯಾಂಡ್ ನಿವಾಸಿಗಳಾದ ಹಸ್ತಿಮಾಲ್ ಫರ್ಮಾರ್ ಮತ್ತು ಆತನ ಪತ್ನಿ ಸಂಗೀತಾ ಎಂದು ಗುರುತಿಸಲಾಗಿದೆ.795 ಗ್ರಾಂ ನಕಲಿ ಚಿನ್ನವನ್ನು ಗಿರವಿ ಇಟ್ಟು ಗೋಲ್ಡ್ ಫೈನಾನ್ಸ್ ಕಂಪನಿಗೆ ವಂಚಿಸಿದ ಆರೋಪ ಈ ದಂಪತಿ ಮೇಲಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಇನ್ನು ಆರೋಪಿಗಳು ನಕಲಿ ಚಿನ್ನವನ್ನು ಒತ್ತೆ ಇಟ್ಟು ಸಾಲದ ರೂಪದಲ್ಲಿ 26,99,910 ರೂ. ತೆಗೆದುಕೊಂಡಿದ್ದು, ಗೋಲ್ಡ್ ಫೈನಾನ್ಸ್ ಕಂಪನಿಯ ತಜ್ಞರು ಅಕ್ಟೋಬರ್ 1 ರಂದು ಚಿನ್ನವನ್ನು ಪರಿಶೀಲಿಸಿದಾಗ, ದಂಪತಿಗಳು ಒತ್ತೆ ಇಟ್ಟಿದ್ದ ಚಿನ್ನವು ನಕಲಿ ಎಂದು ಕಂಡುಬಂದಿದೆ. ನಂತರ ಕಂಪನಿಯು ಆರೋಪಿಗಳಿಗೆ ಸಾಲದ ಮೊತ್ತವನ್ನು ಪಾವತಿಸುವಂತೆ ನೋಟಿಸ್ ಕಳುಹಿಸಿದೆ. ಆದರೆ ದಂಪತಿಗಳು ಇದಕ್ಕೆ ಪ್ರತಿಕ್ರಿಯಿಸದಿದ್ದಾಗ ಕಂಪನಿಯು ದಂಪತಿ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸರಿಗೆ ವಂಚನೆ ಮತ್ತು ನಂಬಿಕೆ ದ್ರೋಹದ ದೂರು ದಾಖಲಿಸಿದೆ.