ಮುಂಬೈ ; ಪೊಲೀಸ್ ಸಹಾಯವಾಣಿ ಸಂಖ್ಯೆ 112 ಗೆ ಅಂಧೇರಿ, ಜುಹು ಸೇರಿದಂತೆ ಮುಂಬೈನ ಮೂರು ಸ್ಥಳಗಳಲ್ಲಿ ಬಾಂಬ್ ಸ್ಫೋಟದ ಬೆದರಿಕೆ ಬಂದಿದ್ದು, ಈ ಕರೆ ಮಾಡಿದವರ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ. ಇನ್ನು ಈ ಬೆದರಿಕೆ ಕರೆಗಳ ನಂತ್ರ ಪೊಲೀಸ್ ವ್ಯವಸ್ಥೆಯು ಎಚ್ಚೆತ್ತುಕೊಂಡಿದ್ದು, ತಪಾಸಣೆ ನಡೆಸುತ್ತಿದೆ.
ಮುಂಬೈ ಪೊಲೀಸರ ಸಹಾಯವಾಣಿಗೆ ಕರೆ ಮಾಡಿದವರು ಅಂಧೇರಿಯ ಇನ್ಫಿನಿಟಿ ಮಾಲ್ ಮುಂಬೈ, ಜುಹುವಿನ ಪಿವಿಆರ್ ಮಾಲ್ ಮತ್ತು ಸಹಾರಾ ಹೋಟೆಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಸಂಭವಿಸಲಿದೆ ಎಂದು ಹೇಳಿದ್ದಾರೆ.
ಬೆದರಿಕೆ ಕರೆ ಸ್ವೀಕರಿಸಿದ ನಂತರ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದೆ. ಸಹಾರಾ ವಿಮಾನ ನಿಲ್ದಾಣ ಪೊಲೀಸರು, ಜುಹು, ಅಂಬೋಲಿ ಮತ್ತು ಬಂಗೂರ್ ನಗರ ಪೊಲೀಸ್ ಠಾಣೆಗಳು ಮತ್ತು ಸಿಐಎಸ್‌ಎಫ್ ಮತ್ತು ಬಿಡಿಡಿಎಸ್ ತನಿಖಾ ಕಾರ್ಯವನ್ನ ಪ್ರಾರಂಭಿಸಿವೆ. ಪೊಲೀಸರು ಎಲ್ಲಾ ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಆದ್ರೆ, ಸ್ಥಳದಲ್ಲಿ ಯಾವುದೇ ಸ್ಫೋಟಕಗಳು ಅಥವಾ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ. ಪೊಲೀಸರು ಇನ್ನೂ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಮೂಲಗಳ ಪ್ರಕಾರ, ಮುಂಬೈ ಪೊಲೀಸ್ ಸಹಾಯವಾಣಿ 112 ಗೆ ಮಂಗಳವಾರ ಮಧ್ಯಾಹ್ನ 13.30ಕ್ಕೆ ಕರೆ ಬಂದಿದೆ. ಮುಂಬೈ ಪೊಲೀಸರು ಕರೆ ಮಾಡಿದವರನ್ನ ಹುಡುಕುತ್ತಿದ್ದಾರೆ. ಕರೆ ಮಾಡಿದವರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ.