ಮಂಗಳೂರು: ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡುವ ಮೂಲಕ ಎರಡು ವರ್ಷದ ಕೂಸೊಂದು ಎಲ್ಲರಿಗೂ ಮಾದರಿಯಾಗಿದ್ದಾಳೆ.ಮರೋಳಿಯ ಭರತ್ ಕುಲಾಲ್ ಹಾಗೂ ಸುಮಲತಾ ದಂಪತಿಯ ಪುತ್ರಿ ಆದ್ಯ ಕುಲಾಲ್ ಕ್ಯಾನ್ಸರ್ ಪೀಡಿತರಿಗೆ ವಿಗ್ ಮಾಡಲು ತಮ್ಮ ಕೂದಲನ್ನು ದಾನ ಮಾಡಿದ್ದಾಳೆ. ಇಷ್ಟೊಂದು ಸಣ್ಣ ವಯಸ್ಸಿಗೆ ಈ ರೀತಿಯ ಕಾರ್ಯವನ್ನು ಮಾಡಿರೋದು ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.
ಈಕೆಯ ಸಾಧನೆಯ ಬಗ್ಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಈ ರೀತಿ ಬರೆದುಕೊಂಡಿದ್ದಾರೆ. “ನಮಸ್ತೇ ಕುಡ್ಲ, ಆದ್ಯ ಕುಲಾಲ್ ಎಂಬ ಮರೋಳಿಯ ಈ ಮಗುವಿನ ಧೈರ್ಯ ಮತ್ತು ಆಸಕ್ತಿಯನ್ನು ಗಮನಿಸಿ ನಿಜಕ್ಕೂ ನಾನು ಭಾವುಕನಾದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ (2.4 ವರ್ಷ) ಆಕೆ ತನ್ನ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ್ದಾಳೆ. ಸಮಾಜಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸೇವೆ ಸಲ್ಲಿಸಲು ನಮ್ಮಲ್ಲಿ ಅನೇಕರನ್ನು ಪ್ರೇರೇಪಿಸಿದ್ದಾಳೆ. ಮರೋಳಿಯ ಸುಮಲತಾ ಹಾಗೂ ಭರತ್ ಕುಲಾಲ್ ದಂಪತಿ ಅವಳನ್ನು ಸರಿಯಾಗಿ ಬೆಳೆಸುತ್ತಿದ್ದಾರೆ. ಅವಳು ಕೂದಲು ದಾನದ ಕಾರಣವನ್ನು ಅರ್ಥಮಾಡಿಕೊಳ್ಳದಿರಬಹುದು. ಆದರೆ ಅವಳು ಬೆಳೆದಾಗ ಅದರ ಬಗ್ಗೆ ತಿಳಿದುಕೊಳ್ಳಲು ನಿಜಕ್ಕೂ ಸಂತೋಷಪಡುತ್ತಾಳೆ. ಸೊಲ್ಮೇಲು,” ಎಂದು ಬರೆದಿದ್ದಾರೆ. ನಿಜಕ್ಕೂ ಈ ಪುಟ್ಟ ಮಗುವಿನ ಕಾರ್ಯಕ್ಕೆ ನಿಜಕ್ಕೂ ಮೆಚ್ಚುಗೆ ವ್ಯಕ್ತಪಡಿಸಬೇಕು.