ಮಂಗಳೂರು,: ಚಿತ್ರಕಲೆಯನ್ನು ಯುವಜನಾಂಗಕ್ಕೆ ಧಾರೆಯೆರೆದ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾಗಿರುವ ಬಿ.ಜಿ. ಮೊಹಮ್ಮದ್ ಅವರು ಈ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅನನ್ಯವಾದುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶುಕ್ರವಾರ ಬಿ.ಜಿ. ಮೊಹಮ್ಮದ್ ಅವರ ಜನ್ಮ ಶತಮಾನೋತ್ಸವ ಸಮಾರಂಭ ಮತ್ತು ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರೇಷ್ಠ ಚಿತ್ರಕಲಾವಿದ ಬಿ.ಜಿ.ಮೊಹಮ್ಮದ್ ಅವರ ಜನ್ಮ ಶತಮಾನೋತ್ಸವದಲ್ಲಿ ಭಾಗವಹಿಸುತ್ತಿರುವುದು ನನಗೆ ಸಂತಸ ತಂದಿದೆ. ಅವರ ಗೌರ ವಾರ್ಥ ಅಂಚೆ ಇಲಾಖೆ ವಿಶೇಷ ಲಕೋಟೆ ಬಿಡುಗಡೆ ಮಾಡುತ್ತಿರು ವುದು ಹೆಮ್ಮೆಯ ಸಂಗತಿ ಎಂದರು.ಸ್ಮರಣಸಂಚಿಕೆಯನ್ನು ಬಿಡುಗಡೆಗೊಳಿಸಿದ ಮಾತನಾಡಿದ ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್. ಯಡಪಡಿತ್ತಾಯ, ಚಿತ್ರಕಲಾವಿದರಾಗಿ ಅಪೂರ್ವ ಕಲಾಕೃತಿಗಳನ್ನು ನೀಡಿರುವ, ಅಸಂಖ್ಯಾಕ ಚಿತ್ರ ಕಲಾ ವಿದರನ್ನು ರೂಪಿಸಿದ ಮೊಹಮ್ಮದ್ ಉನ್ನತ ಸಾಧಕ ಎಂದಿದ್ದಾರೆ.
ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿದ್ದು, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಭಾರತಿ ಶೆಟ್ಟಿ, ಮೇಯರ್ ಜಯಾನಂದ ಅಂಚನ್ ಉಪಸ್ಥಿತರಿದ್ದರು.ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಲಿದ್ದು ಅ.29ರಂದು ಬೆಳಗ್ಗೆ 10.30ಕ್ಕೆ 10 ವರ್ಷದ ಒಳಗಿನ ಮಕ್ಕಳ ಚಿತ್ರಕಲಾಸ್ಪರ್ಧೆ, ಸಂಜೆ 4ಕ್ಕೆ ಚಿತ್ರಕಲಾ ಪ್ರಾತ್ಯಕ್ಷಿಕೆ, ಅ.30ರಂದು ಬೆಳಗ್ಗೆ 10ರಿಂದ ಆಶು ಚಿತ್ರರಚನೆ, ಸಂಜೆ ಚಿತ್ರಕಲಾ ಪ್ರಾತ್ಯಕ್ಷಿಕೆ ಹಾಗೂ ಸಮ್ಮಾನ ನಡೆಯಲಿದೆ.