ಬೆಂಗಳೂರು : ಭಾರತದ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. 5 ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ನರೇಂದ್ರ ಮೋದಿ ಒಂದು ದಿನ ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಮಾಡಲಿದ್ದಾರೆ ಹಾಗೂ ಥೀಮ್ ಪಾರ್ಕ್‌ಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಕರ್ನಾಟಕ ಸರ್ಕಾರ, ಕರ್ನಾಟಕದ ಬಿಜೆಪಿ ಘಟಕ ಮೋದಿ ಆಗಮನಕ್ಕೆ ಸಿದ್ಧತೆಗಳನ್ನು ನಡೆಸುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್. ಲತಾ ಅಧಿಕಾರಿಗಳ ಜೊತೆ ನರೇಂದ್ರ ಮೋದಿ ಕಾರ್ಯಕ್ರಮದ ಕುರಿತು ಸಭೆ ನಡೆಸಿದರು. ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಪರಸ್ಪರ ಸಮನ್ವಯದೊಂದಿಗೆ ನಿರ್ವಹಿಸಬೇಕು ಎಂದು ಸೂಚಿಸಿದರು.
ಈ ಕಾರ್ಯಕ್ರಮವು ಅತ್ಯಂತ ಮಹತ್ವದ್ದಾಗಿದ್ದು,ಸರ್ಕಾರದ ಉನ್ನತ ಮಟ್ಟದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಜಿಲ್ಲಾಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಪರಸ್ಪರ ಸಮನ್ವಯದೊಂದಿಗೆ, ಯಾವುದೇ ಲೋಪಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದರು.
ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಬೆಳಗ್ಗೆಯಿಂದಲೇ ಭೋಜನದ ವ್ಯವಸ್ಥೆ ಮಾಡಲಾಗುತ್ತಿದೆ. ಸ್ಥಾಪಿಸಲಾಗುವ ಊಟದ ವಿತರಣೆ ಕೌಂಟರ್‌ಗಳ ಸಂಖ್ಯೆ ಆಧರಿಸಿ ಅವುಗಳ ಉಸ್ತುವಾರಿಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ.
ಆಹಾರವು ಚೆಲ್ಲಿ, ಎಲ್ಲೆಡೆ ಹರಡದ ಹಾಗೆ ಸ್ವಚ್ಛತೆಗೆ ಹೆಚ್ಚು ಕ್ರಮವಹಿಸಿ, ಸಾಕಷ್ಟು ಪ್ರಮಾಣದಲ್ಲಿ ಆಹಾರ ತ್ಯಾಜ್ಯದ ಸಂಗ್ರಹಕ್ಕೆ ತೊಟ್ಟಿಗಳನ್ನು ನಿಗದಿತ ಸ್ಥಳಗಳಲ್ಲಿ ಇರಿಸಬೇಕು. ಪೌರ ಕಾರ್ಮಿಕರನ್ನು ನಿಯೋಜಿಸಬೇಕು. ಆಹಾರದ ಗುಣಮಟ್ಟದ ಬಗ್ಗೆಯೂ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಕೋವಿಡ್ ತಪಾಸಣೆ ಕಡ್ಡಾಯ
ನರೇಂದ್ರ ಮೋದಿ ಕಾರ್ಯಕ್ರಮದ ಕರ್ತವ್ಯಕ್ಕೆ ನಿಯೋಜಿಸಲ್ಪಡುವ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್ ತಪಾಸಣೆ ಮಾಡಿಸಿಕೊಂಡು, ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದೆ. ಅಧಿಕಾರಿಗಳ ಸ್ವ್ಯಾಬ್ ಸಂಗ್ರಹಿಸಲು ಜಿಲ್ಲಾಡಳಿತ ಭವನದಲ್ಲಿ ಕೌಂಟರ್ ಸ್ಥಾಪಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ರೇವಣಪ್ಪ, ಉಪಕಾರ್ಯದರ್ಶಿ ಡಾ. ನಾಗರಾಜ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶಾಲಿನಿ ಮುಂತಾದವರು ಪಾಲ್ಗೊಂಡಿದ್ದರು. 108 ಅಡಿ ಪ್ರತಿಮೆ ಲೋಕಾರ್ಪಣೆ; ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆಯ ಉದ್ಘಾಟನೆ ಹಾಗೂ ಥೀಮ್ ಪಾರ್ಕ್ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ.
ಕರ್ನಾಟಕ ಸರ್ಕಾರ ಈಗಾಗಲೇ ಪವಿತ್ರ ಮೃತ್ತಿಕೆ (ಮಣ್ಣು) ಸಂಗ್ರಹ ಅಭಿಯಾನವನ್ನು ನಡೆಸುತ್ತಿದೆ. ಥೀಮ್ ಪಾರ್ಕ್ ನಿರ್ಮಾಣಕ್ಕಾಗಿ ಈ ಮಣ್ಣನ್ನು ಬಳಸಿಕೊಳ್ಳಲಾಗುತ್ತದೆ. ಪ್ರತಿಮೆ ನಿರ್ಮಾಣದ ಬಳಿಕ 23 ಎಕರೆ ಪ್ರದೇಶದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಇದೊಂದು ಪಕ್ಷಾತೀತ ಕಾರ್ಯಕ್ರಮವಾಗಿದೆ. ಕೆಂಪೇಗೌಡರ ಭವ್ಯ ಪ್ರತಿಮೆಯನ್ನು ನಿರ್ಮಾಣ ಮಾಡಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು.
ಕೆಂಪೇಗೌಡರು ನಿರ್ಮಾಣ ಮಾಡಿದ ಬೆಂಗಳೂರು ಇಂದು ಜಗತಿಕ ಮಟ್ಟದಲ್ಲಿ ಬೆಳೆದಿದೆ. ಬೆಂಗಳೂರು ವಿಮಾನ ನಿಲ್ದಾಣದ ಸಮೀಪ ನಿರ್ಮಾಣಗೊಂಡಿರುವ ಪ್ರತಿಮೆ ಪ್ರಮುಖ ಆಕರ್ಷಣೆಯಾಗಲಿದೆ. ಇದಕ್ಕೆ ‘ಪ್ರಗತಿ ಪ್ರತಿಮೆ’ ಎಂದು ನಾಮಕರಣ ಮಾಡಲಾಗಿದೆ. ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಬೆಂಗಳೂರಿನಲ್ಲಿಯೇ ಅತಿ ಎತ್ತರದ ಪ್ರತಿಮೆಯಾಗಿದೆ. ರಾಜ್ಯದಲ್ಲಿ ತುಮಕೂರಿನಲ್ಲಿರುವ ಪಂಚಮುಖಿ ಆಂಜನೇಯ 161 ಅಡಿ, ಮುರುಡೇಶ್ವರದಲ್ಲಿರುವ ಶಿವನ ಪ್ರತಿಮೆ 123 ಅಡಿ ಎತ್ತರವಿದೆ.