ಮಂಗಳೂರು: ಬದಿಯಡ್ಕದ ಹೆಸರಾಂತ ದಂತ ವೈದ್ಯ ಡಾ.ಕೃಷ್ಣಮೂರ್ತಿಯವರ ನಿಗೂಢ ಸಾವಿನ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರರಿಗೆ ಮನವಿ ಸಲ್ಲಿಸಲಾಯಿತು.
ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ವಿಶ್ವ ಹಿಂದು ಪರಿಷತ್ ಸಚಿವರಿಗೆ ಮನವಿ ಸಲ್ಲಿಸಿದೆ. ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಕಳೆದ 30 ವರ್ಷಗಳಿಂದ ದಂತ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಕೃಷ್ಣಮೂರ್ತಿಯವರು ನವೆಂಬರ್ 8ರಂದು ನಾಪತ್ತೆಯಾಗಿದ್ದರು. ಆದರೆ ನವೆಂಬರ್ 9ರಂದು ಅವರ ಮೃತದೇಹ ಕುಂದಾಪುರದ ತಲ್ಲೂರಿನ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಮೃತದೇಹ ನೋಡಿದಾಗ ಇದೊಂದು ಕೊಲೆ ಕೃತ್ಯದ ರೀತಿಯಲ್ಲಿ ಸಂಶಯ ಮೂಡುತ್ತಿದೆ.
ಈಗಾಗಲೇ ಈ ಪ್ರಕರಣದ ಬಗ್ಗೆ ಬದಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಕೇರಳ ಪೊಲೀಸರ ತನಿಖೆಯ ಮೇಲೆ ಭರವಸೆ ಇಲ್ಲದ ಹಿನ್ನಲೆಯಲ್ಲಿ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ಮನವಿ ಮಾಡಲಾಗಿದೆ.