ಮಂಗಳೂರು : ಅವಿಭಜಿತ ಕರಾವಳಿ ಜಿಲ್ಲೆಯಲ್ಲಿ ಕಣ್ಣು ನೋವು ( ಕೆಂಗಣ್ಣು) ಸಮಸ್ಯೆ ಹೆಚ್ಚಾಗಿದ್ದು, ಕಣ್ಣು ಆಸ್ಪತ್ರೆಗಳಲ್ಲಿ ದಿನದಿಂದ ದಿನಕ್ಕೆ ಇಂತಹ ಸಮಸ್ಯೆಗಳ ಸರತಿ ಸಾಲು ಉದ್ದವಾಗುತ್ತಿದೆ. ಮಕ್ಕಳಾದರೆ ಶಾಲೆಗೆ ಬರಬೇಡಿ ದೊಡ್ಡವರಾದರೆ ಕಚೇರಿಗೆ ಬರಬೇಡಿ ಎಂದು ಬೇಡುವ ಸ್ಥಿತಿ ಉದ್ಭವಾಗಿದೆ. ಎಲ್ಲಕ್ಕೂ ಹವಾಮಾನ ವೈಪರೀತ್ಯವೇ ಕಾರಣ ಎನ್ನುವುದು ಆರೋಗ್ಯ ತಜ್ಞರ ಮಾತು.
ಇದು ಕಣ್ಣು ನೋವು (ಮದ್ರಾಸ್ ಐ) ಬರುವ ಸಮಯವಲ್ಲ. ಹೆಚ್ಚಾಗಿ ಮಾನ್ಸೂನ್ ಸಮಯದಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಈಗ ಬಿಟ್ಟು ಬರುವ ಮಳೆಯ ಜತೆಗೆ ಚಳಿಯ ಪ್ರವೇಶ ಎರಡು ಜತೆಗೂಡಿದಾಗ ಈ ವಿಶೇಷ ವೈರಸ್ ಯಾವುದೇ ವಯಸ್ಸು ನೋಡದೇ ಕಣ್ಣುಗಳ ಮೇಲೆ ದಾಳಿ ಇಡುತ್ತಾ ಕಣ್ಣು ನೋವು ತರಿಸುತ್ತಿದೆ.
ಬೇಸಿಗೆ ಬಿಟ್ಟು ಚಳಿಯಲ್ಲಿ ಕಾಣಿಸಿತು:
ಐ ಕಾಂಜಂಕ್ಟಿವಿಟಿಸ್ ಅಥವಾ ಮದ್ರಾಸ್ ಐ ಸಮಸ್ಯೆಯು ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಈ ಬಾರಿ ಮಳೆಗಾಲ ಮುಗಿದು ಚಳಿಗಾಲದ ಆರಂಭದಲ್ಲೇ ವಕ್ಕರಿಸಿದೆ. ಇದಕ್ಕೆ ಬಹುಮುಖ್ಯವಾದ ಕಾರಣ ಇತ್ತೀಚೆಗೆ ಕಾಣಿಸಿಕೊಂಡ ಆಗಾಗಿನ ಮಳೆ. ಇದರ ಜತೆಯಲ್ಲಿಮಾ ನ್ಸೂನ್ ಪೂರ್ಣವಾಗಿ ಮುಗಿಯುವ ಹೊತ್ತಿನಲ್ಲಿ ಈ ಕಣ್ಣಿನ ವೈರಸ್ ತನ್ನ ಅಬ್ಬರವನ್ನು ತೋರಿಸಿದೆ.
ಈ ರೋಗದಲ್ಲಿ, ಕಣ್ಣುಗಳ ಬಿಳಿ ಭಾಗದಲ್ಲಿ ಸೋಂಕು ಸಂಭವಿಸುತ್ತದೆ ಮತ್ತು ಅದರ ಬಣ್ಣವು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ತಲುಪುತ್ತದೆ. ಆದರೆ, ಕೆಲವೊಮ್ಮೆ ಧೂಳು, ಹೊಗೆ ಮತ್ತು ಮಾಲಿನ್ಯದಿಂದಲೂ ಈ ಸಮಸ್ಯೆ ಉಂಟಾಗುತ್ತದೆ.
ಫಾದರ್ ಮುಲ್ಲರ್ಸ್ ಆಸ್ಪತ್ರೆ ಹಾಗೂ ನೇತ್ರಾ ಜ್ಯೋತಿ ರೆಟಿನಾ ಸೆಂಟರ್‌ನ ವೈದ್ಯ ಡಾ.ಶ್ರೀಪತಿ ಕಾಮತ್ ಅವರು ಹೇಳುವಂತೆ ಈ ಸಮಸ್ಯೆ ಕಣ್ಣಿನ ಸರ್ಜರಿ ಆಗಿರುವವರು ಹಾಗೂ ಮಧುಮೇಹಿಗಳ ವಿಚಾರದಲ್ಲಿ ಕೊಂಚ ಜಾಗ್ರತೆ ಅಗತ್ಯ. ಉಳಿದಂತೆ ಇದಕ್ಕೆ ಬೇಕಿರುವ ಡ್ರಾಪ್ಸ್ ಹಾಕಿದರೆ ಐದು ದಿನಗಳಲ್ಲಿ ಸರಿಹೋಗುತ್ತದೆ.
ಮುಖ್ಯವಾಗಿ ಕಣ್ಣಿನ ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನ ನೀಡುವುದು ಅಗತ್ಯ. ಕೆಲವೊಂದು ಪ್ರಕರಣಗಳಲ್ಲಿ ಕಣ್ಣಿನ ಬಿಳಿ ಭಾಗದಿಂದ ಕಾರ್ನಿಯಾದ ಕಡೆಗೂ ವೈರಸ್ ದಾಳಿ ನಡೆಸುತ್ತದೆ. ಇಂತಹ ಸಮಸ್ಯೆಗಳು ಇದ್ದಾಗ ತಕ್ಷಣವೇ ವೈದ್ಯರ ಬಳಿಗೆ ಹೋಗಬೇಕು. ಉಳಿದಂತೆ ಇದೊಂದು ವೈರಲ್ ಕಾಯಿಲೆ ಹೆಚ್ಚು ಅಪಾಯ ಇರೋದಿಲ್ಲ ಆದ್ರೆ ಜಾಗ್ರತೆ ಅತೀ ಅಗತ್ಯ ಎನ್ನುತ್ತಾರೆ ಅವರು.
ಆರೋಗ್ಯ ಇಲಾಖೆಗೆ ತಲೆನೋವು:
ಕರಾವಳಿಯಲ್ಲಿ ಕಾಣಿಸಿಕೊಳ್ಳುತ್ತಿರುವ ವೈರಲ್ ಜ್ವರ ಸೇರಿದಂತೆ ಕೆಂಗಣ್ಣು ವಿಚಾರದಲ್ಲಿ ಆರೋಗ್ಯ ಇಲಾಖೆ ಹೆಚ್ಚು ತಲೆ ಕೆಡಿಸಿಕೊಂಡಿದೆ. ಈಗಾಗಲೇ ಕರಾವಳಿಯಲ್ಲಿ ವ್ಯಾಪಕ ರೀತಿಯಲ್ಲಿ ಕಣ್ಣು ನೋವು ಸಮಸ್ಯೆಗಳು ಇಲಾಖೆಯ ಗಮನಕ್ಕೆ ಬಂದಿದೆ. ಈ ಕಾರಣದಿಂದ ಡಿಡಿಪಿಐ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಲಾಗಿದೆ. ಯಾವುದಾದರೂ ತೀವ್ರ ಸಮಸ್ಯೆಗಳು ಕಾಣಿಸಿಕೊಂಡರೆ ತಕ್ಷಣವೇ ಇಲಾಖೆಯ ಗಮನಕ್ಕೆ ತರಬೇಕು ಎಂದು ಹೇಳಿದ್ದೇವೆ ಎಂದು ದಕ್ಷಿಣ ಕನ್ನಡ ಡಿಎಚ್‌ಒ ಡಾ. ಕಿಶೋರ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸುಧಾಕರ ಅವರು ಹೇಳುವಂತೆ ದ.ಕ ಜಿಲ್ಲೆಯಲ್ಲಿ ಬಹುತೇಕ ಶಾಲೆಗಳಲ್ಲಿ ಕಣ್ಣು ನೋವಿನ ಸಮಸ್ಯೆ ಮಕ್ಕಳನ್ನು ಕಾಡಿದೆ. ಡಿಎಚ್‌ಒ ಅವರು ನೀಡಿದ ಸೂಚನೆಯನ್ನು ಪಾಲಿಸುತ್ತಾ ಮಕ್ಕಳಲ್ಲಿ ಇಂತಹ ಸಮಸ್ಯೆಗಳು ಬಂದರೆ ಅವರನ್ನು ಶಾಲೆಗೆ ಕಳುಹಿಸಬೇಡಿ. ಯಾಕೆಂದರೆ ಈ ಮಕ್ಕಳಿಂದ ಮತ್ತಷ್ಟು ಮಕ್ಕಳಿಗೆ ಹರಡುವ ಸಾಧ್ಯತೆ ಇದೆ. ಐದಾರು ದಿನ ವಿಶ್ರಾಂತಿ ಪಡೆದುಕೊಂಡು ಶಾಲೆಗೆ ಬಂದರೆ ಸಾಕು ಎಂದು ಸೂಚನೆ ನೀಡಿದ್ದೇವೆ
ಶಾಲೆಗಳಿಂದ ಕೂಡ ಇಂತಹ ಎಚ್ಚರಿಕೆ, ಮಾಹಿತಿ, ಜಾಗೃತಿಯ ಸಂದೇಶಗಳು ಹೆತ್ತವರಿಗೆ ಬರುತ್ತಿದೆ. ಮಕ್ಕಳಲ್ಲಿ ಈ ಸಮಸ್ಯೆ ಬೇಗನೆ ಹರಡುತ್ತದೆ. ಈ ಕಾರಣದಿಂದ ಸಮಸ್ಯೆ ಇದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು ಇದರಿಂದ ಬೇರೆ ಮಕ್ಕಳಿಗೆ ಹರಡುವ ಸಾಧ್ಯತೆ ಇದೆ. ಈಗಾಗಲೇ ಆಸ್ಪತ್ರೆಗಳಲ್ಲಿ ಕಣ್ಣಿನ ಪರೀಕ್ಷೆಗೆ ಬರುವ 100 ರೋಗಿಗಳಲ್ಲಿ ಸರಿಸುಮಾರು 40ರಿಂದ 50 ಇದೇ ಸಮಸ್ಯೆಯಿಂದ ಬರುತ್ತಿದ್ದಾರೆ ಎನ್ನುತ್ತಾರೆ ಫಾದರ್ ಮುಲ್ಲರ್ಸ್ ಆಸ್ಪತ್ರೆ ಹಾಗೂ ನೇತ್ರಾ ಜ್ಯೋತಿ ರೆಟಿನಾ ಸೆಂಟರ್‌ನ ವೈದ್ಯ ಡಾ.ಶ್ರೀಪತಿ ಕಾಮತ್.
ಸೋಂಕು ಬರದಂತೆ ತಡೆಯುವುದು ಹೇಗೆ ?
ಸೋಂಕಿತ ಕಣ್ಣನ್ನು ಮುಟ್ಟುವುದು ಅಥವಾ ಉಜ್ಜುವುದನ್ನು ತಪ್ಪಿಸಿ. ದಿನಕ್ಕೆ ಹಲವಾರು ಬಾರಿ ತಣ್ಣೀರಿನಿಂದ ನಿಮ್ಮ ಕಣ್ಣುಗಳನ್ನು ತೊಳೆಯಿರಿ. ಬೇರೆಯವರ ಟವೆಲ್, ಕರವಸ್ತ್ರ, ದಿಂಬು, ಹಾಸಿಗೆ ಇತ್ಯಾದಿಗಳನ್ನು ಬಳಸುವುದನ್ನು ತಪ್ಪಿಸಿ. ದ್ವಿಚಕ್ರ ವಾಹನ ಸವಾರಿ ಮಾಡುವಾಗ ಯಾವಾಗಲೂ ಸನ್ ಗ್ಲಾಸ್ ಧರಿಸಿ. ಯಾವಾಗಲೂ ಕನ್ನಡಕ ಹಾಕಿಕೊಂಡಿರಿ. ಈಗಾಗಲೇ ಈ ಕಾಯಿಲೆಯಿಂದ ಬಳಲುತ್ತಿರುವವರಿಂದ ದೂರವಿರಿ.
ರೋಗಲಕ್ಷಣಗಳು
ಮದ್ರಾಸ್ ಕಣ್ಣು ಸೋಂಕಿತ ವ್ಯಕ್ತಿಯ ಕಣ್ಣಿನಿಂದ ಹೊರಬರುವ ದ್ರವದ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಮಾನ್ಯ ಸೋಂಕು. ಇದು ಹೆಚ್ಚಾಗಿ ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕಿನಿಂದ ಉಂಟಾಗುತ್ತದೆ.
ತುರಿಕೆ ಸಂವೇದನೆ, ಕಣ್ಣುಗಳ ಕೆಂಪು, ತೀವ್ರ ಕಿರಿಕಿರಿಯೊಂದಿಗೆ ಕಣ್ಣಿನ ಕೆಂಪು, ಕಣ್ಣಿನ ಬಿಳಿ ಭಾಗದ ಕೆಂಪು, ಬೆಳಕಿಗೆ ಒಡ್ಡಿಕೊಂಡಾಗ ಕಣ್ಣು ಕುಟುಕುವುದು, ಕಣ್ಣಿನಿಂದ ಕೊಳಕು ಹೊರಸೂಸುವುದು, ಕೆಲವು ರೋಗಿಗಳು ಕಣ್ಣಿನ ಊತವನ್ನು ಅನುಭವಿಸುತ್ತಾರೆ. ಈ ಸೋಂಕು ದೃಷ್ಟಿಯ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಆದರೆ ವೈದ್ಯರ ಚೀಟಿ ಇಲ್ಲದೆ ಯಾವುದೇ ಡ್ರಾಫ್ಸ್ ಅಥವಾ ಔಷಧ ಬಳಕೆಯನ್ನು ಮಾಡುವುದು ಬಹಳ ಅಪಾಯಕಾರಿ.
ಎಚ್ಚರ ಅಗತ್ಯ
ಈ ರೋಗದ ಸಮಯದಲ್ಲಿ, ಸೋಂಕಿತ ವ್ಯಕ್ತಿಗೆ ಕಣ್ಣುಗಳಲ್ಲಿ ತುರಿಕೆ, ಮಸುಕಾದ ದೃಷ್ಟಿ ಮುಂತಾದ ಸಮಸ್ಯೆಗಳಿರುತ್ತದೆ. ವೈದ್ಯರ ಪ್ರಕಾರ, ದಿನದಲ್ಲಿ ಸಾಕಷ್ಟು ನೀರು ಕುಡಿಯುವುದು ಇದನ್ನು ತಪ್ಪಿಸಲು ಉತ್ತಮ ಮಾರ್ಗವಾಗಿದೆ. ಇದಲ್ಲದೆ, ಹಸಿರು ತರಕಾರಿಗಳು, ತಾಜಾ ಹಣ್ಣುಗಳನ್ನು ಸೇವಿಸುವುದು, ಉತ್ತಮ ನಿದ್ರೆ ಇತ್ಯಾದಿಗಳನ್ನು ಸಹ ಈ ರೋಗವನ್ನು ದೂರವಿರಿಸಲು ಸಹಾಯ ಮಾಡುತ್ತದೆ. ಸೌತೆಕಾಯಿ ಮೊದಲಾದ ತಣ್ಣನೆಯ ವಸ್ತುಗಳನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳುವುದು ಕೂಡ ಈ ಋುತುವಿನಲ್ಲಿ ತಾಜಾತನದ ಅನುಭವ ನೀಡುತ್ತದೆ.
ಈ ವೈರಸ್ ಕಣ್ಣುಗಳನ್ನು ಸ್ಪರ್ಶಿಸುವ ಮೂಲಕ ಹರಡುವುದರಿಂದ, ಸೋಂಕಿನ ಸಮಯದಲ್ಲಿ ನೀವು ಕಣ್ಣನ್ನು ಉಜ್ಜುವುದು ಅಥವಾ ಸ್ಪರ್ಶಿಸುವುದನ್ನು ತಪ್ಪಿಸಬೇಕು. ಕಣ್ಣುಗಳಿಂದ ಹೆಚ್ಚುವರಿ ದ್ರವವು ಹರಿದುಹೋದರೆ, ಕಣ್ಣುಗಳನ್ನು ಸ್ವಚ್ಛಗೊಳಿಸಲು ಅಂಗಾಂಶಗಳನ್ನು ಬಳಸಿ. ಪೀಡಿತ ಮಕ್ಕಳು ಶಾಲೆಗಳಿಗೆ ಹೋಗಬಾರದು ಮತ್ತು ಕಚೇರಿಗೆ ಹೋಗುವವರು ರಜೆ ತೆಗೆದುಕೊಳ್ಳಬೇಕು.