ಬೆಂಗಳೂರು: ಬಾಂಬ್ ಬ್ಲಾಸ್ಟ್ ಪ್ರಕರಣದ ಸಂಬಂಧ ನಾಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳೂರಿಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಹಾಗೂ ಎಡಿಜಿಪಿ ಅಲೋಕ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಭೇಟಿ ಸಂದರ್ಭದಲ್ಲಿ ಸಚಿವರು, ಬಾಂಬ್ ಸ್ಫೋಟ ಘಟನೆಯಿಂದ ಗಾಯಗೊಂಡ ಆಟೋ ರಿಕ್ಷಾ ಚಾಲಕನನ್ನೂ ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮಂಗಳೂರು ಆಟೋ ರಿಕ್ಷಾ ಬಾಂಬ್ ಸ್ಫೋಟ ಘಟನೆಯನ್ನು ರಾಜ್ಯ ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಭಯೋತ್ಪಾದನೆ ಚಟುವಟಿಕೆಗಳನ್ನು ಆಮೂಲಗ್ರಹವಾಗಿ ತನಿಖೆ ಮಾಡಿ, ದ್ರೋಹಿಗಳನ್ನು ಮಟ್ಟ ಹಾಕಲು ಪೋಲಿಸರು ಶ್ರಮಿಸುತ್ತಿದ್ದಾರೆ. ರಾಷ್ಟ್ರೀಯ ತನಿಖಾ ದಳವೂ (NIA) ಇದಕ್ಕೆ ಸಹಕರಿಸುತ್ತಿದೆ ಎಂದು ಹೇಳಿದ್ದಾರೆ.
ಈವರೆಗಿನ ಮಾಹಿತಿ ಆಧರಿಸಿ, ರಾಜ್ಯ ಪೊಲೀಸರು ಉಗ್ರಗಾಮಿ ಚಟುವಟಿಕೆಗಳಿಗೆ ಸಹಕರಿಸಿದವರ ವಿರುದ್ಧ ತನಿಖೆ ತೀವ್ರಗೊಳಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್ನಿಂದ ಇನ್ನೂ ಹೆಚ್ಚಿನ ಮಾಹಿತಿಗಳು ಹೊರಬರಬೇಕಿದೆ ಎಂದು ಹೇಳಿದ್ದಾರೆ