ಉಡುಪಿ: ಎಂಟು ವರ್ಷಗಳ ಹಿಂದೆ ಕೊಲೆ ಪ್ರಕರಣದ ಸಾಕ್ಷಿಗೆ ಹಲ್ಲೆಗೈದು, ಮಾನಭಂಗ ನಡೆಸಿದ ಆರೋಪಿಗೆ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂರು ವರ್ಷ ಜೈಲುಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಧನಂಜಯ್ (35) ಶಿಕ್ಷೆಗೆ ಗುರಿಯಾದ ಆರೋಪಿ. 2013ರ ನ.27ರಂದು ಪ್ರೀತಿ ನಿರಾಕರಿಸಿದ ಕಾರಣಕ್ಕೆ ಯೋಗೀಶ್ ಎಂಬಾತ ರಂಜಿತಾ ಎಂಬವರನ್ನು ಕಡೆಕಾರು ಗ್ರಾಮದ ಪಟೇಲರ ತೋಟ ಎಂಬಲ್ಲಿ ಕೊಲೆ ಮಾಡಿದ್ದ. ಈ ಬಗ್ಗೆ ರಂಜಿತಾ ಅವರ ಸಂಬಂಧಿ ಹಾಗೂ ನೆರೆಮನೆಯ ಅಶ್ವಿನಿ ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿ ಪ್ರಮುಖ ಸಾಕ್ಷಿಯಾಗಿದ್ದರು.
ಈ ಹಿನ್ನೆಲೆಯಲ್ಲಿ ಕೊಲೆ ಪ್ರಕರಣದ ಆರೋಪಿ ಯೋಗೀಶ್‌ನ ಸಂಬಂಧಿ ಧನಂಜಯ್ ಎಂಬಾತ 2014ರ ಸೆ.10ರಂದು ಅಶ್ವಿನಿ ಅವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ, ಕೈಯಿಂದ ಹಲ್ಲೆ ನಡೆಸಿ ಬಟ್ಟೆಯನ್ನು ಹರಿದು ಮಾನಕ್ಕೆ ಕುಂದು ಉಂಟು ಮಾಡಿದ್ದನು. ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ರಂಜಿತಾಳ ಕೊಲೆ ಪ್ರಕರಣದಲ್ಲಿ ಸಾಕ್ಷಿ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಈ ಬಗ್ಗೆ ಆರೋಪಿ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ 448, 323, 354(ಬಿ), 504, 506, 195(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ದಿನೇಶ್ ಹೆಗ್ಡೆ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು, ಆರೋಪಿಗೆ ಅಕ್ರಮ ಪ್ರವೇಶಕ್ಕೆ 6 ತಿಂಗಳು ಸಾದಾ ಜೈಲು ಶಿಕ್ಷೆ, ಹಲ್ಲೆಗೆ 6 ತಿಂಗಳು ಸಾದಾ ಜೈಲು ಶಿಕ್ಷೆ, ಮಾನಭಂಗಕ್ಕೆ 3 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ, ಅವಾಚ್ಯ ಶಬ್ದಗಳಿಂದ ಬೈದಿದಕ್ಕೆ 6 ತಿಂಗಳು ಜೈಲು ಶಿಕ್ಷೆ ಮತ್ತು ಕೊಲೆ ಬೆದರಿಕೆಗೆ 6 ತಿಂಗಳು ಜೈಲು ಶಿಕ್ಷೆ ಮತ್ತು 5ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದರು. ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಷನ್ ಜಯರಾಮ ಶೆಟ್ಟಿ ವಾದಿಸಿದ್ದರು.