ಉಡುಪಿ: ಜನರ ತೀವ್ರ ವಿರೋಧದ ನಡುವೆಯೂ ಸದ್ದಿಲ್ಲದೇ ಹೆಜಮಾಡಿ ಟೋಲ್‌ನಲ್ಲಿ ವಾಹನಗಳಿಂದ ಹೆಚ್ಚುವರಿ ಶುಲ್ಕ ವಸೂಲಿಗೆ ಮುಂದಾಗಿರುವುದು ಜನಾಕ್ರೋಶಕ್ಕೆ ಕಾರಣ ವಾಗಿದೆ. ಸಾರ್ವಜನಿಕರು ಮತ್ತೆ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.
ಜಿಲ್ಲೆಯ ಶಾಸಕರು, ಸಚಿವರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳೂ ಸುರತ್ಕಲ್ ಟೋಲ್‌ನ ದರವನ್ನು ಹೆಜಮಾಡಿಯಲ್ಲಿ ಸಂಗ್ರಹಿಸಲು ವಿರೋಧ ವ್ಯಕ್ತಪಡಿಸಿದ್ದಾರೆ.
ಆದರೂ ಇದಾವುದಕ್ಕೂ ಟೋಲ್ ಗುತ್ತಿಗೆಯ ಕಂಪೆನಿಯಾಗಲೀ ಅಥವಾ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾಗಲೀ ಬೆಲೆಯೇ ಕೊಡದಿರುವುದೂ ಜನಾಕ್ರೋಶವನ್ನು ಹೆಚ್ಚಿಸಿದೆ.
ಹೆಜಮಾಡಿ ಟೋಲ್ ದರ ಪರಿಷ್ಕರಣೆ ವಿಷಯವಾಗಿ ಡಿ. 5ರಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯ ಸಚಿವ ನಿತಿನ್ ಗಡ್ಕರಿಯವರು ವಿಶೇಷ ಸಭೆ ನಡೆಸುವುದಾಗಿ ಶಾಸಕ ಕೆ. ರಘುಪತಿ ಭಟ್ ಅವರಿಗೆ ಭರವಸೆ ನೀಡಿದ್ದರು. ಹಾಗೆಯೇ ಡಿ. 3ರಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಇಂಧನ ಸಚಿವ ಸುನಿಲ್ ಕುಮಾರ್ ಸಹಿತ ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳ ಸಭೆ ನಡೆದಿತ್ತು. ಈ ಸಭೆಯಲ್ಲಿ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭಾಗವಹಿಸಿದ್ದರು.
ಮುಖ್ಯಮಂತ್ರಿಯವರ ಜತೆ ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸುವವರೆಗೂ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದರು. ಆದರೂ ಈಗ ಅಧಿಕಾರಿಗಳು ಡಿ. 4ರಿಂದಲೇ ಟೋಲ್ ದರವನ್ನು ಹೆಚ್ಚಿಸಲು ಮುಂದಾಗಿರುವುದು ವಿರೋಧಕ್ಕೆ ಕಾರಣವಾಗಿದೆ.