ಬೆಳ್ತಂಗಡಿ: ಕಕ್ಕಿಂಜೆಯ ಖಾಸಗಿ ಆಸ್ಪತ್ರೆಗೆ ಸೇರಿದ ಆ್ಯಂಬುಲೆನ್ಸ್ ಬೆಳ್ತಂಗಡಿ ಸೇತುವೆ ಬಳಿ ಪಲ್ಟಿಯಾದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಅಪಘಾತದಿಂದಾಗಿ ಆ್ಯಂಬುಲೆನ್ಸ್ ನಲ್ಲಿದ್ದ ಓರ್ವ ವೈದ್ಯ ಸೇರಿ ಒಟ್ಟು ಮೂವರಿಗೆ ಗಾಯಗಳಾಗಿವೆ. ಈ ಪೈಕಿ ವೈದ್ಯ ಡಾ.ನಿತಿನ್ ಅವರಿಗೆ ಕೈಯಲ್ಲಿ ಮೂಳೆ ಮುರಿತಕ್ಕೊಳಗಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನಿಬ್ಬರು ಗಾಯಾಳುಗಳಾದ ಆಸ್ಪತ್ರೆಯ ಸಿಬ್ಬಂದಿಗಳಾದ ರಿತೇಶ್ ಮತ್ತು ಹುಝೈರ್ ಎಂಬವರಾಗಿದ್ದಾರೆ. ಇವರಿಬ್ಬರಿಗೂ ಸಣ್ಣ ಗಾಯಗಳಾಗಿದ್ದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ವೇಳೆ ಆ್ಯಂಬುಲೆನ್ಸ್ ನಲ್ಲಿ ರೋಗಿಗಳು ಇರಲಿಲ್ಲ ಎಂದು ತಿಳಿದು ಬಂದಿದೆ.
ಮೆಡಿಸಿನ್ ಪಾರ್ಸೆಲ್ ವಿಚಾರವಾಗಿ ಆಂಬುಲೆನ್ಸ್ ನಲ್ಲಿ ಬೆಳ್ತಂಗಡಿಗೆ ಬಂದಿದ್ದರು ಎಂದು ಗೊತ್ತಾಗಿದೆ. ಅಪಘಾತದಿಂದಾಗಿ ಬೊಲೆರೋ ಆ್ಯಂಬುಲೆನ್ಸ್ ವಾಹನ ಬಹುತೇಕ ನುಜ್ಜುಗುಜ್ಜಾಗಿದೆ.
ಘಟನೆಯಿಂದ ಸುಮಾರು ಅರ್ಧ ತಾಸು ಟ್ರಾಫಿಕ್ ಜಾಮ್ ಕೂಡ ಉಂಟಾಯಿತು. ತಕ್ಷಣ ಸ್ಪಂದಿಸಿದ ಬೆಳ್ತಂಗಡಿ ಟ್ರಾಫಿಕ್ ಪೊಲೀಸರು ನಾಗರಿಕರ ಸಹಕಾರದಿಂದ ವಾಹನ ಸಂಚಾರ ಸುಗಮಗೊಳಿಸಿದರು.