ಪುತ್ತೂರು: ನಗರದ ಹಳೆ ತಾಲೂಕು ಕಚೇರಿ ರಸ್ತೆಯಲ್ಲಿರುವ ಜನಸೇವಾ ಕೇಂದ್ರದಲ್ಲಿ ಮತದಾರರ ಗುರುತಿನ ಚೀಟಿಗಳನ್ನು ಅನಧಿಕೃತವಾಗಿ ವಿತರಿಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತ ಗಿರೀಶ್ ನಂದನ್, ತಹಶೀಲ್ದಾರ್ ನಿಸರ್ಗ ಪ್ರಿಯ ನೇತೃತ್ವದ ಅಧಿಕಾರಿಗಳ ತಂಡ ಸೋಮವಾರ ದಾಳಿ ಮಾಡಿ ಬೀಗ ಜಡಿದಿದೆ.
ಗುರುತಿನ ಚೀಟಿ ಕಳೆದುಹೋಗಿದ್ದ ಪುತ್ತೂರಿನ ನಿವಾಸಿಯೋರ್ವರು ಜನಸೇವಾ ಕೇಂದ್ರಕ್ಕೆ ಬಂದು ಮಾಹಿತಿ ನೀಡಿದ್ದರು. ಅಲ್ಲಿನ ಸಿಬಂದಿ ತಾವು ತಯಾರಿಸಿ ಕೊಡುವುದಾಗಿ ಹೇಳಿ ಗುರುತು ಚೀಟಿ ನೀಡಿದ್ದರು. ಆದರೂ ಗುರುತಿನ ಚೀಟಿಯ ಮೇಲೆ ಅನುಮಾನ ಬಂದ ಕಾರಣ ತಾಲೂಕು ಕಚೇರಿಯ ಚುನಾವಣ ಶಾಖೆಗೆ ತೆರಳಿ ತೋರಿಸಿದರು. ಅಧಿಕಾರಿಗಳು ತಪಾಸಣೆ ನಡೆಸಿದಾಗ ಅನುಮತಿ ರಹಿತವಾಗಿ ಗುರುತುಚೀಟಿ ನೀಡಿರುವುದು ಪತ್ತೆಯಾಗಿದೆ.
ಮತದಾರರ ಗುರುತಿನ ಚೀಟಿ ವಿತರಿಸುವ ಅಧಿಕಾರವನ್ನು ಯಾವುದೇ ಬಾಹ್ಯ ಕೇಂದ್ರಗಳಿಗೆ ಕೊಟ್ಟಿಲ್ಲ ಎಂದು ಎಸಿ ತಿಳಿಸಿದ್ದಾರೆ.
ನಮ್ಮ ಜನಸೇವಾ ಕೇಂದ್ರದಲ್ಲಿ ನಿರ್ದಿಷ್ಟ ವೆಬ್‌ಸೈಟ್ ತೆರೆದುಕೊಂಡ ಕಾರಣ ಲಾಗಿನ್ ಆಗಿ ಅರ್ಜಿ ಪ್ರಕ್ರಿಯೆ ನಡೆಸಿ ಕಾರ್ಡ್ ಮುದ್ರಿಸಿಕೊಟ್ಟಿದ್ದೇವೆ. ಇದರ ಪೂರ್ಣ ಮಾಹಿತಿಯನ್ನು ಅಧಿಕಾರಿಗಳಿಗೆ ಪ್ರಾಯೋಗಿಕ ವಾಗಿ ಮಾಡಿ ತೋರಿಸಿದ್ದೇವೆ. ಇದರಲ್ಲಿ ನಮ್ಮ ತಪ್ಪೇನೂ ಇಲ್ಲ ಎಂದು ಕೇಂದ್ರದ ಮಾಲಕಿ ಪ್ರತಿಕ್ರಿಯಿಸಿದ್ದಾರೆ.