ಉಡುಪಿ: ಮ್ಯೂಚುವಲ್ ಫಂಡ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ಆನ್‌ಲೈನ್ ವಂಚಕರು 78,500 ರೂ.ಗಳನ್ನು ವಂಚಿಸಿದ ಘಟನೆ ನಡೆದಿದೆ.
ಅನುಷ್ ರವಿಶಂಕರ್ ವಂಚನೆಗೆ ಒಳಗಾದವರು. ಅನುಷ್ ಅವರಿಗೆ ಅಪರಿಚಿತರು 9395641735 ಸಂಖ್ಯೆಯಿಂದ ಕರೆ ಮಾಡಿ ಮ್ಯೂಚುವಲ್ ಫಂಡ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಹಣ ದ್ವಿಗುಣಗೊಳಿಸಿ ನೀಡುವುದಾಗಿ ಆಮಿಷವೊಡ್ಡಿದ್ದಾರೆ. ಅವರ ಮಾತನ್ನು ನಂಬಿದ ಅನುಷ್ ಗೂಗಲ್ ಪೇ ಮುಖಾಂತರ ಆ ವ್ಯಕ್ತಿ ತಿಳಿಸಿದ ಬ್ಯಾಂಕ್ ಖಾತೆಗೆ ಕ್ರಮವಾಗಿ 1000 ರೂ., 3000 ರೂ., 3000 ರೂ. ಮತ್ತು 6500 ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಆ ಬಳಿಕ ಮತ್ತೆ ಸೆಕ್ಯೂರಿಟಿ ಡೆಪಾಸಿಟ್, ಫಿಕ್ಸ್ ಡೆಪಾಸಿಟ್, ರಿಪಂಡ್ ಸೆಕ್ಯೂರಿಟಿ ಡೆಪಾಸಿಟ್‌ಗಳಿಗೂ ಹಣ ಪಾವತಿ ಮಾಡುವಂತೆ ಅಪರಿಚಿತ ವ್ಯಕ್ತಿ ತಿಳಿಸಿದ್ದು, ಆತ ಹೇಳಿದಂತೆ 9500 ರೂ., 22500 ರೂ., 14500 ರೂ., 18500 ರೂ.ಗಳನ್ನು ಪಾವತಿಸಿದ್ದಾರೆ.
ಹೀಗೆ ಅನುಷ್ ಅವರು ಹಂತ ಹಂತವಾಗಿ ಒಟ್ಟು 78,500 ರೂ.ಗಳನ್ನು ಆತ ಹೇಳಿದಂತೆಯೇ ಪಾವತಿ ಮಾಡಿದ್ದಾರೆ. ಆದರೆ ಬಳಿಕ ಹೂಡಿಕೆ ಮಾಡಿದ ಹಣವನ್ನು ವಾಪಾಸ್ ನೀಡದೇ ವ್ಯಕ್ತಿ ವಂಚನೆ ಎಸಗಿದ್ದಾನೆ. ಈ ಹಿನ್ನೆಲೆಯಲ್ಲಿ ಉಡುಪಿ ಸೆನ್ ಪೊಲೀಸ್ ಠಾಣೆಗೆ ಅನುಷ್ ಅವರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.