ಬೆಂಗಳೂರು: ಅಪಘಾತವಾಗಿರುವ ವಾಹನಗಳನ್ನ ಇನ್ನು ಮುಂದೆ ಸಂಚಾರಿ ಪೊಲೀಸ್ ಠಾಣೆಗಳ ಮುಂದೆ ತಿಂಗಳುಗಟ್ಟಲೇ ಇರಿಸಿಕೊಳ್ಳುವಂತಿಲ್ಲ. ತಪಾಸಣೆ ನೆಪದಲ್ಲಿ ಠಾಣೆಗಳ ಮುಂದೆ ವಾಹನ ಇರಿಸಿಕೊಳ್ಳುವುದು ಸರಿಯಲ್ಲ. ಆಯಕ್ಸಿಡೆಂಟ್ ಆದ ವಾಹನಗಳನ್ನ 24 ಗಂಟೆಯೊಳಗೆ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಮಾಲೀಕರಿಗೆ ಹಿಂತಿರುಗಿಸಲಾಗುವುದು ನಗರ ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ.ಎ.ಸಲೀಂ ತಿಳಿಸಿದ್ದಾರೆ.
ಅಪಘಾತ ಪ್ರಕರಣಗಳಲ್ಲಿ ವಾಹನಗಳನ್ನ ವಶಪಡಿಸಿಕೊಂಡು ಠಾಣೆಗಳ ಮುಂದೆ ನಿಲ್ಲಿಸಲಾಗುತ್ತಿದೆ. ಠಾಣೆಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ನಿಲ್ಲಿಸಲಾಗುತ್ತಿದ್ದು ಇದರಿಂದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಆಕ್ಸಿಡೆಂಟ್ ಆಗಿರುವ ಅಥವಾ ಅಪಘಾತ ಮಾಡಿರುವ ವಾಹನಗಳನ್ನ ಆರ್ ಟಿಓ ಅಧಿಕಾರಿಗಳಿಂದ ತ್ವರಿತವಾಗಿ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು.. ತಾಂತ್ರಿಕವಾಗಿ ವಾಹನಗಳಲ್ಲಿ ದೋಷವಿದೆಯಾ ಎಂಬುದನ್ನು ಪತ್ತೆ ಹಚ್ಚಿ ಅಧಿಕಾರಿಗಳು ವರದಿ ತರಿಸಿ ಬಳಿಕ ಸಂಬಂಧಪಟ್ಟ ಮಾಲೀಕರನ್ನ ಕರೆಯಿಸಿ ಅವರಿಂದ ಮುಚ್ಚಳಿಕೆ ಬರೆಯಿಸಿ ಹಿಂತಿರುಗಿಸಲಾಗುವುದು ಎಂದಿದ್ದಾರೆ.
ನಗರದಲ್ಲಿ ಹಂಪ್ ಗಳಿಂದ ಆಯಕ್ಸಿಡೆಂಟ್ ಜಾಸ್ತಿ ಆಗ್ತಿತ್ತು.. ಹೀಗಾಗಿ ಎಲ್ಲೆಲ್ಲಿ ಅವೈಜ್ಞಾನಿಕ ಹಂಪ್‌ಗಳು ಹಾಗೂ ಅನಾವಶ್ಯಕ ಹಂಪ್ ಗಳಿದ್ದರೆ ತೆಗೆಯುವುದಕ್ಕೆ ಹೇಳಲಾಗಿದೆ. ಜೊತೆಗೆ ಸಿಗ್ನಲ್ ಗಳ ಬಳಿ ಇರುವ ಹಂಪ್ ಗಳನ್ನ ತೆಗೆಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅವಶ್ಯಕತೆ ಇರುವ ಕಡೆ ರಬ್ಬರ್ ಹಂಪ್ ಹಾಕಲು ಸೂಚಿಸಲಾಗಿದೆ. ಸವಾರರ ಸುರಕ್ಷತೆ ದೃಷ್ಟಿಯಿಂದ ಈ ರೀತಿ ಮಾಡಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳ ಜೊತೆ ಚರ್ಚಿಸಿದ್ದು ಕೆಲಸ ಶುರು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.