ಮಂಗಳೂರು: ಚೀನಾ ಸೇರಿದಂತೆ ಕೆಲವು ದೇಶಗಳಲ್ಲಿ ಕೊರೋನ ರೂಪಾಂತರಿ ತಳಿಯ ಹಾವಳಿ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮದ ಭಾಗವಾಗಿ ವಿದೇಶದಿಂದ ಆಗಮಿಸುವ ಪ್ರಯಾಣಿಕರಲ್ಲಿ ಕೋವಿಡ್ ಲಕ್ಷಣ ಕಂಡು ಬಂದಲ್ಲಿ ಅವರನ್ನು ಪ್ರತ್ಯೇಕಿಸುವ ನಿಟ್ಟಿನಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ 25 ಹಾಸಿಗೆಯ ಐಸೊಲೇಶನ್ ವಾರ್ಡ್ ಸಿದ್ದಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿದೇಶಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರಕಾರ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿದೆಯಲ್ಲದೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಮಿಸುವ ವಿದೇಶಿ ಪ್ರಯಾಣಿಕರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈ ವೇಳೆ ಕೋವಿಡ್ ದೃಢಪಟ್ಟರೆ ಆ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಲ್ಯಾಬ್‌ಗೆ ಕಳುಹಿಸಲಾಗುತ್ತದೆ. ಕೋವಿಡ್ ದೃಢಪಟ್ಟ ವ್ಯಕ್ತಿಗಳಿಗೆ ಐಸೊಲೇಶನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಸನ್ನದ್ಧವಾಗಿದೆ.
ಕೋವಿಡ್ ಸೋಂಕನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಆರೋಗ್ಯ ಅಣಕು ಪ್ರದರ್ಶನವು ಮಂಗಳವಾರ ವೆನ್ಲಾಕ್ ಸಹಿತ ತಾಲೂಕು ಸರಕಾರಿ ಆಸ್ಪತ್ರೆಗಳಲ್ಲಿ ನಡೆಸಲಾಗಿದೆ.