ಮಂಗಳೂರು: ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡು ಅಪರಾಧ ಪತ್ತೆ, ನಿಯಂತ್ರಣ ಮತ್ತು ತ್ವರಿತ ತನಿಖೆಗೆ ಮುಂದಾಗಿರುವ ಪೊಲೀಸ್ ಇಲಾಖೆ ರಾಜ್ಯಾದ್ಯಂತ ಲಕ್ಷಾಂತರ ಸಿಸಿ ಕೆಮರಾಗಳನ್ನು ಜಿಯೋ ಟ್ಯಾಗಿಂಗ್ ಮಾಡಿಕೊಳ್ಳುತ್ತಿದೆ.
ಸಾರ್ವಜನಿಕ ಸುರಕ್ಷೆ ಕಾಯಿದೆ ಯಡಿ ದಿನಕ್ಕೆ 500ಕ್ಕಿಂತ ಹೆಚ್ಚು ಬಾರಿ ಜನರ ಓಡಾಟವಿರುವ ಅಥವಾ ಒಂದೇ ಬಾರಿಗೆ 100 ಮಂದಿಯ ಓಡಾಟವಿರುವ ಕಟ್ಟಡ/ಮಳಿಗೆಗಳಲ್ಲಿ ಸಿಸಿ ಕೆಮರಾ ಕಡ್ಡಾಯಗೊಳಿಸಲಾಗಿದ್ದು ಈ ರೀತಿ ಅಳವಡಿಕೆಯಾಗಿರುವ, ಸಾರ್ವಜನಿಕ ಸ್ಥಳದ ಪಕ್ಕ ಇರುವ ಕೆಮರಾಗಳನ್ನು ಜಿಯೋ ಟ್ಯಾಗಿಂಗ್‌ಗೆ ಒಳಪಡಿಸಲಾಗುತ್ತಿದೆ.
ಏನಿದು ಜಿಯೋ ಟ್ಯಾಗಿಂಗ್?
ಜಿಯೋ ಟ್ಯಾಗಿಂಗ್ ಎಂಬುದು ಪೊಲೀಸ್ ಇಲಾಖೆಯ ಆಯಪ್‌ವೊಂದರಡಿ ಕಾರ್ಯಾಚರಿಸುತ್ತದೆ. ಇದು ಜಿಐಎಸ್ (ಜಿಯೋಗ್ರಾಫಿಕ್ ಇನ್‌ಫಾರ್ಮೇಷನ್ ಸಿಸ್ಟಂ) ಆಗಿದ್ದು ಸಿಸಿ ಕೆಮರಾಗಳು ನಿರ್ದಿಷ್ಟವಾಗಿ ಯಾವ ಕಟ್ಟಡದ, ಯಾವ ಭಾಗದಲ್ಲಿವೆ, ಯಾವ ಕಡೆ ಮುಖ ಮಾಡಿವೆ, ಅವುಗಳ ಸ್ಟೋರೇಜ್ ಸಾಮರ್ಥ್ಯ ಎಷ್ಟು ಎಂಬಿತ್ಯಾದಿ ಸ್ಪಷ್ಟ ಮಾಹಿತಿಗಳು ಆಯಪ್‌ನಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಯಾವುದೇ ಸ್ಥಳದಲ್ಲಿ ಏನಾದರೂ ಅಹಿತರ ಘಟನೆ ನಡೆದರೆ ಅಲ್ಲಿರುವ ಕೆಮರಾಗಳ ಮಾಹಿತಿ ಕ್ಷಣಾರ್ಧದಲ್ಲಿ ಪೊಲೀಸರಿಗೆ ಲಭ್ಯವಾಗುತ್ತದೆ. ಅಲ್ಲದೆ ಸಿಸಿ ಕೆಮರಾಗಳ ಲೊಕೇಶನ್, ಸ್ಥಿತಿಗತಿಯ ಬಗ್ಗೆ ಪ್ರತಿ ತಿಂಗಳು ಪೊಲೀಸರು ತಪಾಸಣೆ ಕೂಡ ನಡೆಸುತ್ತಾರೆ.
ಮಂಗಳೂರಿನಲ್ಲಿ ಗರಿಷ್ಠ ಮ್ಯಾಪಿಂಗ್
ಬೆಂಗಳೂರು ಹೊರತುಪಡಿಸಿದರೆ ಮಂಗಳೂರಿನಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಸಿಸಿ ಕೆಮರಾಗಳನ್ನು ಜಿಯೋ ಟ್ಯಾಗಿಂಗ್‌ಗೆ ಒಳಪಡಿಸಲಾಗಿದೆ. ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 30,000ಕ್ಕೂ ಅಧಿಕ ಹಾಗೂ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 2,000, ಬೆಂಗಳೂರಿನಲ್ಲಿ ವಿವಿಧ ಉಪವಿಭಾಗಗಳು ಸೇರಿದಂತೆ 1.25 ಲಕ್ಷಕ್ಕೂ ಅಧಿಕ, ಬೆಳಗಾವಿಯಲ್ಲಿ ಸುಮರು 25,000, ಕಲುºರ್ಗಿಯಲ್ಲಿ ಸುಮಾರು 12,000, ಮೈಸೂರಿನಲ್ಲಿ ಸುಮಾರು 10,000, ಹಾಸನದಲ್ಲಿ 2,400ಕ್ಕೂ ಅಧಿಕ ಸಿಸಿ ಕೆಮರಾಗಳು ಜಿಯೋ ಟ್ಯಾಗಿಂಗ್‌ನಲ್ಲಿವೆ.