ಮಂಗಳೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಹೊಸ ವರ್ಷಾಚರಣೆಯ ಸಂಧರ್ಭದಲ್ಲಿ ಮಂಗಳೂರು ನಗರದಾದ್ಯಂತ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿಕೆ ನೀಡಿದ್ದು, ಕಾನೂನು ಮೀರಿ ತಿರುಗಾಡುವವರನ್ನು ವಶಕ್ಕೆ ಪಡೆಯುವ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಜಿಲ್ಲಾಧಿಕಾರಿಗಳ ಸಭೆಯಂತೆ ನಿಯಮಾವಳಿ ರೂಪಿಸಲಾಗಿದೆ. 12.30ಕ್ಕೆ ಕಾರ್ಯಕ್ರಮ ಮುಗಿಸಿ 10 ಗಂಟೆಗೆ ಧ್ವನಿ ವರ್ಧಕ ಬಂದ್ ಮಾಡಬೇಕು. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 32 ಚೆಕ್ ಪೋಸ್ಟ್ ಹಾಕಲಾಗಿದೆ. ಯಾವುದೇ ತೊಂದರೆ ಇಲ್ಲದೇ ಸಂಭ್ರಮಾಚರಣೆಗಳನ್ನು ಮಾಡಬೇಕು ಎಂದು ಹೇಳಿದ್ದಾರೆ.
ಬೀಚ್ ಅಥವಾ ಯಾವುದೇ ಜಾಗದಲ್ಲಿ ಸಂಭ್ರಮಾಚರಣೆ ಮಾಡಲು ಅನುಮತಿ ಪಡೆದು ಮಾಡಬೇಕು. ಅನುಮತಿ ಇಲ್ಲದೇ ಯಾವುದೇ ಆಚರಣೆಗೆ ಅವಕಾಶ ಇಲ್ಲ. ರಾತ್ರಿ 12.30ಗೆ ಎಲ್ಲವೂ ಕ್ಲೋಸ್ ಆಗುವಾಗ ಆ ಬಳಿಕ ಯಾರೂ ರಸ್ತೆಯಲ್ಲಿ ಇರಬಾರದು. ತ್ರಿಬಲ್ ರೈಡ್ ಅಥವಾ ಕುಡಿದು ವಾಹನ ಚಾಲನೆಗೆ ಅವಕಾಶ ಇಲ್ಲ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಕಮಿಷನರ್ ವ್ಯಾಪ್ತಿಯಲ್ಲಿ ಸ್ವಲ್ಪ ಸೂಕ್ಷ್ಮ ಪರಿಸ್ಥಿತಿ ಇತ್ತು. ಯಾವುದೇ ಸಂಘಟನೆಗಳಿಗೆ ಎಚ್ಚರಿಕೆ ಕೊಡುವ ಅಧಿಕಾರ ಇಲ್ಲ. ಸಾರ್ವಜನಿಕ ಜಾಗದ ಆಚರಣೆಗೆ ಯಾರೂ ಹೋಗಬಾರದು ಅಂತ ಹೇಳುವ ಹಾಗಿಲ್ಲ. ಯಾರಾದರೂ ತೊಂದರೆ ಕೊಟ್ಟರೆ 112ಗೆ ಸಂಪರ್ಕ ಮಾಡಿ. ಅಥವಾ ಸ್ಥಳೀಯ ಪೊಲೀಸ್ ಠಾಣೆ ಸಂಪರ್ಕಿಸಿ ದೂರು ಕೊಡಿ. ನಿಯಮ ಪಾಲಿಸಿ ಜವಾಬ್ದಾರಿಯುತವಾಗಿ ಆಚರಿಸಿ ಎಂದು ಸಾರ್ವಜನಿಕರಿಗೆ ಪೊಲೀಸ್ ಆಯಕ್ತರು ಹೇಳಿದ್ದಾರೆ.
ಸುರತ್ಕಲ್ ಭಾಗದಲ್ಲಿ ಹೆಚ್ಚಿನ ಪೊಲೀಸ್ ಭಧ್ರತೆ ಮಾಡಲಾಗಿದೆ. ಸುರತ್ಕಲ್ ಭಾಗದ ಎಲ್ಲಾ ಹೊಟೇಲ್ ಬಾರ್ ಕ್ಲಬ್ ಮಾಲಕರನ್ನು ಕರೆದು ಮಾಹಿತಿ ನೀಡಲಾಗಿದೆ. ಮಧ್ಯರಾತ್ರಿಯ ಸಂಧರ್ಭದಲ್ಲಿ ಅನಾವಶ್ಯಕವಾಗಿ ತಿರುಗಾಡುವವರನ್ನು ವಶಕ್ಕೆ ಪಡೆಯುತ್ತೇವೆ. ಕಾನೂನಿನಡಿಯಲ್ಲಿ ಪ್ರಕರಣವನ್ನು ದಾಖಲಿಸುತ್ತೇವೆ. ಪೊಲೀಸರೂ ಹೊಸವರ್ಷಾಚರಣೆಯನ್ನು ಆಚರಿಸಬೇಕು. ಅವರ ಜೊತೆ ವಾಗ್ವಾದ, ಕೇಸ್ ಮಾಡುವ ರೀತಿ ಆಗದಂತೆ ಸಹಕರಿಸಿ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಹೇಳಿದ್ದಾರೆ.