ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿ ಆಹಾರವನ್ನು ಸೇವಿಸಿದ ಹಲವಾರು ಶಾಲಾ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಮಯೂರೇಶ್ವರ ಬ್ಲಾಕ್ ನ ಪ್ರಾಥಮಿಕ ಶಾಲೆಯ ಸುಮಾರು 30 ವಿದ್ಯಾರ್ಥಿಗಳು ಸೋಮವಾರ ಮಧ್ಯಾಹ್ನದ ಊಟದಲ್ಲಿ ಬಡಿಸಿದ ಆಹಾರವನ್ನು ಸೇವಿಸಿದ ನಂತರ ಅಸ್ವಸ್ಥರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಭೋಜನ ಸಿದ್ಧಪಡಿಸಿದ್ದ ಶಾಲೆಯ ಸಿಬ್ಬಂದಿಯೊಬ್ಬರು, ಬೇಳೆ ತುಂಬಿದ ಕಂಟೈನರ್ ಒಂದರಲ್ಲಿ ಹಾವು ಕಂಡುಬಂದಿದೆ ಎಂದು ಹೇಳಿಕೊಂಡಿದ್ದಾರೆ. ಮಕ್ಕಳು ಅಸ್ವಸ್ಥರಾಗಲು ಇದೇ ಕಾರಣ ಎನ್ನಲಾಗಿದೆ.
“ಮಕ್ಕಳು ವಾಂತಿ ಮಾಡಲು ಪ್ರಾರಂಭಿಸಿದ್ದರಿಂದ ನಾವು ಅವರನ್ನು ರಾಂಪುರಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಬೇಕಾಯಿತು” ಎಂದು ಅವರು ಹೇಳಿದರು. ಮಧ್ಯಾಹ್ನದ ಊಟ ತಿಂದು ಮಕ್ಕಳು ಅಸ್ವಸ್ಥರಾಗುತ್ತಿರುವ ಬಗ್ಗೆ ಹಲವಾರು ಗ್ರಾಮಸ್ಥರಿಂದ ದೂರುಗಳು ಬಂದಿವೆ ಎಂದು ಬ್ಲಾಕ್ ಅಭಿವೃದ್ಧಿ ಅಧಿಕಾರಿ ದೀಪಾಂಜನ್ ಜನಾ ಸುದ್ದಿಗಾರರಿಗೆ ತಿಳಿಸಿದರು.
ಓರ್ವ ವಿದ್ಯಾರ್ಥಿಯನ್ನು ಹೊರತು ಪಡಿಸಿ, ಅಸ್ವಸ್ಥರಾದ ಉಳಿದೆಲ್ಲಾ ವಿದ್ಯಾರ್ಥಿಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆ ವಿದ್ಯಾರ್ಥಿಯೂ ಅಪಾಯದಿಂದ ಪಾರಾಗಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾನೆ.