ಬೆಂಗಳೂರು: ತನ್ನ ತಂದೆಯ ಸಾಲಕ್ಕೆ ಖಾತ್ರಿಯಾಗಿ ಪುತ್ರ ಚೆಕ್ ನೀಡಿದ್ದರೇ, ಆತ ಕೂಡ ಸಾಲಕ್ಕೆ ಜವಾಬ್ದಾರನಾಗಲಿದ್ದು, ಮಗ ಮರುಪಾವತಿ ಮಾಡಬೇಕು ಎಂಬುದಾಗಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ದಾವಣಗೆರೆಯ ಪ್ರಸಾದ್ ರಾಯ್ಕರ್ ಎಂಬುವರು ಸಲ್ಲಿಸಿದ್ದಂತ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದಂತ ನ್ಯಾಯಮೂರ್ತಿ ಕೆ.ನಟರಾಜನ್ ಅವರನ್ನೊಳಗೊಂಡ ಏಕಸದಸ್ಯ ನ್ಯಾಯಪೀಠವು, ನೆಗೋಷಿಯಬಲ್ ಇನ್ಸ್ಟ್ರುಮಂಟ್ ಕಾಯಿದೆಯ ಪ್ರಕಾರ, ತಂದೆಯ ಸಾಲಕ್ಕೆ ಭದ್ರತೆಯಾಗಿ ಮಗ ಚೆಕ್ ನೀಡಿದ್ದರೇ, ಆತ ಕೂಡ ಸಾಲಕ್ಕೆ ಜವಾಬ್ದಾರನಾಗುತ್ತಾನೆ.
ಮಗ ಮರು ಪಾವತಿ ಮಾಡಬೇಕು ಎಂಬುದಾಗಿ ತಿಳಿಸಿದೆ.
ಇನ್ನೂ ಮೃತ ವ್ಯಕ್ತಿಯ ಮಗನಾಗಿದ್ದರೇ, ಮೃತ ತಂದೆಯು ದೂರುದಾರನಿಂದ ಸಾಲ ಪಡೆದಿದ್ರೇ, ಮರು ಪಾವತಿಯ ಒಪ್ಪಿ, ಪುತ್ರ ಅದಕ್ಕೆ ಖಾತ್ರಿಯನ್ನು ನೀಡಿದ್ದರೇ, ಮಗ ತಂದೆಯ ಸಾಲದ ಹಣವನ್ನು ಮರುಪಾವತಿ ಮಾಡಲೇಬೇಕು ಎಂದು ಆದೇಶದಲ್ಲಿ ನ್ಯಾಯಪೀಠವು ತಿಳಿಸಿದೆ.
ಅಂದಹಾಗೇ ದಾವಣಗೆರೆಯ ಆರೋಪಿ ದಿನೇಶ್ ತಂದೆ ಭರಮಪ್ಪ, ಮಾರ್ಚ್ 7, 2003ರಂದು 2.6 ಲಕ್ಷ ಹಣವನ್ನು ಪ್ರಸಾದ್ ರಾಯ್ಕರ್ ಎಂಬುವರಿಂದ ಶೇ.2ರ ಬಡ್ಡಿ ದರದಲ್ಲಿ ಪಡೆದಿದ್ದರು. ಇದಕ್ಕೆ ದಿನೇಶ್ ತಂದೆಯ ಪರವಾಗಿ ಜಾಮೀನಿಗೆ ಸಹಿ ಹಾಕಿದ್ದರು. ಆದ್ರೇ ಭರಮಪ್ಪ 2005ರಲ್ಲಿ ಮೃತಪಟ್ಟಿದ್ದರು.
ಈ ಸಂದರ್ಭದಲ್ಲಿ ಭರಮಪ್ಪ ಪಡೆದಿದ್ದಂತ ಸಾಲ, ಬಡ್ಡಿಯ ಮೊತ್ತ 4.5 ಲಕ್ಷ ಆಗಿತ್ತು. ದಿನೇಶ್ ದೂರುದಾರರಿಗೆ 10 ಸಾವಿರ ಹಣ ಮರುಪಾವತಿಸಿ, ಆ ಬಳಿಕ ಎರಡು ಕಂತುಗಳಲ್ಲಿ ಹಣ ತೀರಿಸುವುದಾಗಿ ಹೇಳಿ 2.5 ಲಕ್ಷ ಚೆಕ್ ನೀಡಿದ್ದರು. ಅವೆರಡೂ ಬೌನ್ಸ್ ಆಗಿದ್ದವು. ಇದನ್ನ ಪ್ರಶ್ನಿಸಿಯೇ ಪ್ರಸಾದ್ ರಾಯ್ಕರ್ ಅವರು ನೆಗೋಷಿಯಬಲ್ ಇನ್ಸುಟ್ರುಮೆಂಟ್ ಕಾಯಿದೆಯಡಿ ದೂರು ಸಲ್ಲಿಸಿದ್ದರು.
ಈ ಪ್ರಕರಣ ವಿಚಾರಣೆ ನಡೆಸಿದ್ದಂತ ದಾವಣೆಗೆರೆ ಜಿಲ್ಲಾ ನ್ಯಾಯಾಲಯವು, ದಿನೇಶ್ ಗೆ ತಂದೆಯ ಹಣಕ್ಕೆ ಜಾಮೀನಾಗಿ ನೀಡಿದ್ದಂತ ಹಣವನ್ನು ಮರುಪಾವತಿಸುವಂತೆ ಆದೇಶಿಸಿದ್ದರು. ಆದ್ರೇ ದಾವಣೆಗೆರೆ ಸೆಷನ್ಸ್ ನ್ಯಾಯಾಲಯದ ಮೊರೆ ಹೋದಾಗ ದಿನೇಶ್ ಹಣ ಮರುಪಾವತಿಸುವ ಅಗತ್ಯವಿಲ್ಲ ಎಂಬುದಾಗಿ ಖುಲಾಸೆಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪ್ರಸಾದ್ ರಾಯ್ಕರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿರುವಂತ ಹೈಕೋರ್ಟ್, ದಿನೇಶ್ ದೂರುದಾರರಿಗೆ ನೀಡಿದ್ದಂತ ಚೆಕ್ ನ ಹಣ ಪಾವತಿಸುವಂತೆ ಆದೇಶಿಸಿದೆ.