ಹೈದರಾಬಾದ್: ನನ್ನಿಂದ ನನ್ನ ಮಗುವಿನ ಸಾವನ್ನು ನೋಡಲಾರೆ ಅಂತಾ ತಾಯಿಯೊಬ್ಬಳು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಹೈದರಾಬಾದ್ನ ಕೆಪಿಎಚ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸ್ವಾತಿ (38) ಮೃತ ದುರ್ದೈವಿ. ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಳು.
ಸ್ವಾತಿ ಮತ್ತು ಆಕೆಯ ಪತಿ ಶ್ರೀಧರ್ 8 ವರ್ಷದ ಓರ್ವ ಮಗನಿದ್ದಾನೆ. ಈ ವಯಸ್ಸಿನಲ್ಲಿ ಆಡಿ ನಲಿಯಬೇಕಾಗಿದ್ದ ಮಗ ಅಂಗವೈಕಲ್ಯದಿಂದ ಬಳಲುತ್ತಿದ್ದಾನೆ. ಆದರೂ ಸ್ವಾತಿಗೆ ತನ್ನ ಮಗನೆಂದರೆ ಎಲ್ಲಿಲ್ಲದ ಪ್ರೀತಿ. ಆದರೆ, ಪತಿಗೆ ಮಾತ್ರ ಮಗನ ಮೇಲೆ ಒಂಚೂರು ಪ್ರೀತಿ ಇಲ್ಲ. ಹೀಗಾಗಿ ಶ್ರೀಧರ್ ಕುಟುಂಬ, ಸ್ವಾತಿಗೆ ಕಿರುಕುಳ ನೀಡಲು ಆರಂಭಿಸಿತು.
ಮಗನಿಗೆ ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸುವಂತೆ ಸ್ವಾತಿಯನ್ನು ಶ್ರೀಧರ್ ಒತ್ತಾಯಿಸುತ್ತಿದ್ದ. ಆದರೆ, ಸ್ವಾತಿ ಮಾತ್ರ ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಆದ್ದರಿಂದ ಆಕೆಯ ಮೇಲಿನ ಕಿರುಕುಳ ಇನ್ನಷ್ಟು ಹೆಚ್ಚಾಯಿತು. ಅದನ್ನು ತಾಳಲಾರದೇ ಮತ್ತು ಮುಂದೊಂದು ದಿನ ಹೇಗಾದರೂ ಮಾಡಿ ನನ್ನ ಮಗನನ್ನು ಇವರೆಲ್ಲ ಸೇರಿ ಸಾಯಿಸುತ್ತಾರೆ. ನನ್ನಿಂದತೂ ಮಗ ಸಾಯುವುದನ್ನು ನೋಡಲಾಗದು ಅಂತಾ ಮನನೊಂದು ತಮ್ಮ 23ನೇ ಮಹಡಿಯಿಂದ ಹಾರಿ ಸ್ವಾತಿ ಪ್ರಾಣ ಬಿಟ್ಟಿದ್ದಾಳೆ.
ಸ್ವಾತಿ ಮೃತದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಶ್ರೀಧರ್ ಹಾಗೂ ಆತನ ಕುಟುಂಬದ ವಿರುದ್ಧ ಕೆಪಿಎಚ್ಬಿ ಪೊಲೀಸ್ ಠಾಣೆಯಲ್ಲಿ ಸ್ವಾತಿ ಪಾಲಕರು ದೂರು ದಾಖಲಿಸಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.