ಮಂಗಳೂರು: ಗಸ್ತು ನಿರತ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಐವರ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಮಂಗಳೂರು ಗ್ರಾಮಾಂತರ ಠಾಣೆಯ ಮಲ್ಲಿಕಾರ್ಜುನ ಅಂಗಡಿ ಎಂಬವರು ಪೊಲೀಸ್ ಕಾನ್‌ಸ್ಟೇಬಲ್ ಪ್ರದೀಪ್ ನಾಗನ ಗೌಡರೊಂದಿಗೆ ಜ.20ರ ಮುಂಜಾವ 2ಕ್ಕೆ ಅರ್ಕುಳ ಜಂಕ್ಷನ್‌ನಿಂದ ತುಪ್ಪೆಕಲ್ಲು ಕಡೆಗೆ ಹೋಗುತ್ತಿದ್ದರು. ಈ ವೇಳೆ ರೈಲ್ವೆ ಹಳಿಯ ಪಕ್ಕದಲ್ಲಿರುವ ಕಾಂಕ್ರಿಟ್ ರಸ್ತೆಯ ಬಳಿಯ ಖಾಲಿ ಸ್ಥಳದಲ್ಲಿ ಬಿಳಿ ಬಣ್ಣದ ಆಲ್ಟೋ ಕಾರೊಂದರ ಬಳಿ ಇಬ್ಬರು ಮತ್ತು ಕಾರಿನೊಳಗೆ ಮೂವರಿದ್ದರು ಎನ್ನಲಾಗಿದೆ.
ಗಸ್ತುನಲ್ಲಿದ್ದ ಮಲ್ಲಿಕಾರ್ಜುನ ಅಂಗಡಿಯವರು ‘ನೀವು ಇಲ್ಲಿ ಏನು ಮಾಡುತ್ತಿದ್ದೀರಿ? ಎಂದು ಕೇಳಿ ಅವರ ಕಡೆಗೆ ಟಾರ್ಚ್ ಹಾಯಿಸಿದ್ದಾರೆ. ಆಗ ಕಾರಿನ ಹೊರಗಡೆ ನಿಂತಿದ್ದ ಇಬ್ಬರು ಪೊಲೀಸರತ್ತ ಕಲ್ಲುಗಳನ್ನು ಎತ್ತಿ ಎಸೆದಿದ್ದಾರೆ ಎನ್ನಲಾಗಿದೆ. ಅವರು ಎಸೆದ ಕಲ್ಲುಗಳು ಇಬ್ಬರು ಪೊಲೀಸರ ಕೈಗೆ ತಾಗಿ ತರಚಿದ ಗಾಯಗಳಾಗಿವೆ. ಕಾರಿನ ಹೊರಗಡೆ ಇದ್ದ ಇಬ್ಬರು ಕಾರಿಗೆ ಹತ್ತಿದೊಡನೆ ಅದರ ಚಾಲಕ ಕಾರನ್ನು ಸ್ಟಾರ್ಟ್ ಮಾಡಿ ಕೊಲೆ ಮಾಡುವ ಉದ್ದೇಶದಿಂದ ಅತೀ ವೇಗವಾಗಿ ಇವರ ಮೇಲೆ ಹತ್ತಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ. ಇಬ್ಬರೂ ರಸ್ತೆಯ ಪಕ್ಕಕ್ಕೆ ಹಾರಿ ಬಚಾವಾಗಿದ್ದಾರೆ ಎನ್ನಲಾಗಿದೆ. ಆರೋಪಿಗಳು ಕರ್ತವ್ಯಕ್ಕೆ ಅಡ್ಡಿಪಡಿಸಿ ಕಲ್ಲು ಎಸೆದು, ಕಾರು ಹಾಯಿಸಿ, ಕೊಲೆಗೆ ಯತ್ನಿಸಿರುವುದಾಗಿ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.