ಬೆಂಗಳೂರು: ಮಂಗಳೂರಿನ ಕಂಕನಾಡಿ ಬಳಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ರೂವಾರಿ ಶಾರೀಕ್ ಆರೋಗ್ಯದಲ್ಲಿ ಕೊನೆಗೂ ಸುಧಾರಣೆ ಕಂಡುಬಂದಿದೆ.
ಕಳೆದ ಒಂದೂವರೆ ತಿಂಗಳುಗಳಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್ ಸದ್ಯದಲ್ಲೇ ಡಿಸ್ಚಾರ್ಜ್ ಮಾಡಲು ಸಿದ್ಧತೆಗಳು ನಡೆದಿವೆ.
ಡಿಸ್ಚಾರ್ಜ್ ಬಳಿಕ ಎನ್‌ಐಎ ವಶಕ್ಕೆ: ಸ್ಫೋಟದ ಸಂದರ್ಭದಲ್ಲಿ ಶೇ 25 ರಷ್ಟು ಸುಟ್ಟ ಗಾಯಗಳಿಂದ ಬಚಾವಾಗಿದ್ದ ಶಾರೀಕ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಫೋಟದ ಪರಿಣಾಮದಿಂದಾಗಿ ಶಾರೀಕ್ ಮುಖ ಹಾಗೂ ಎದೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ. ಕಳೆದ ಒಂದೂವರೆ ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಶಾರೀಕ್ ಭಾಗಶಃ ಗುಣಮುಖನಾಗಿದ್ದು, ಬಹುತೇಕ ಸುಟ್ಟ ಗಾಯಗಳು ವಾಸಿಯಾಗಿವೆ. ಸಣ್ಣ ಪುಟ್ಟ ಗಾಯಗಳಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ. ಈಗಾಗಲೇ ಚಿಕಿತ್ಸೆಯ ಜೊತೆ ಜೊತೆಗೆ ಬಹುತೇಕ ವಿಚಾರಣೆ ನಡೆಸಿರೋ ಎನ್‌ಐಎ ಅಧಿಕಾರಿಗಳ ತಂಡ ಮುಂದಿನ ವಾರವೇ ಶಾರೀಕ್ನನ್ನು ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ವಶಕ್ಕೆ ಪಡೆಯಲಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.