ಮಂಗಳೂರು: ರಾಜ್ಯ ಬಜೆಟ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಾಗಿ ಹೇಳಿ ಬಿಲ್ಲವ ಸಮುದಾಯವನ್ನು ದಾರಿ ತಪ್ಪಿಸುವ ಕೆಲಸವನ್ನು ಮುಖ್ಯಮಂತ್ರಿ ಸಹಿತ ರಾಜ್ಯದ ಬಿಲ್ಲವ ಸಚಿವರು ಮಾಡಿದ್ದಾರೆ ಎಂದು ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಹೇಳಿದ್ದಾರೆ.
ಇತ್ತೀಚೆಗೆ ಬಿಲ್ಲವ ಸಮುದಾಯದ ಮುಖಂಡರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ವೇಳೆ ಮುಂದಿನ ಬಜೆಟ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಘೋಷಣೆ ಮಾಡುವುದಾಗಿ ಹೇಳಿದ್ದರು ಇದಕ್ಕೆ ಜಿಲ್ಲೆಯ ಬಿಲ್ಲವ ಶಾಸಕರು, ಸಚಿವರೂ ಕೂಡ ಸಾಕ್ಷಿಯಾಗಿದ್ದರು ಆದರೆ ನಿನ್ನೆ ಮಂಡಿಸಿದ ಬಜೆಟ್ ನಲ್ಲಿ ಇದರ ಬಗ್ಗೆ ಚಕಾರವೆತ್ತದಿರುವುದು ಸಮುದಾಯಕ್ಕೆ ಬಿಜೆಪಿ ಸರಕಾರ ಮಾಡಿದ ದ್ರೋಹವಾಗಿದೆ.
ರಾಜ್ಯ ಸರ್ಕಾರ ಮಾಡಿದ ಈ ಮೋಸಕ್ಕೆ ಮುಂದಿನ ದಿನಗಳಲ್ಲಿ ಬಿಲ್ಲವ ಸಮುದಾಯ ತಕ್ಕ ಉತ್ತರ ನೀಡುತ್ತದೆ. ಮುಖ್ಯಮಂತ್ರಿಯವರು ಮಂಡಿಸಿದ ಬಜೆಟ್ ನಲ್ಲಿ ಬಿಲ್ಲವ ಸಮುದಾಯ ಮಾತ್ರವಲ್ಲದೆ ಇತರ ಸಮುದಾಯಗಳಾದ ಮೊಗವೀರ ಹಾಗೂ ಹಿಂದುಳಿದ ಸಮುದಾಯಗಳಾಗಲಿ ಯಾರ ಅಭಿವೃದ್ಧಿಗೆ ಬೇಕಾಗುವ ಯಾವುದೇ ಯೋಜನೆಗಳನ್ನು ರೂಪಿಸುವಲ್ಲಿ ವಿಫಲರಾಗಿದ್ದಾರೆ.
ಉದ್ಯೋಗದ ಅವಕಾಶಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಉದ್ಯೋಗ ಖಾತರಿ ಯೋಜನೆಯನ್ನು ವಿಸ್ತರಿಸದೆ ಇರುವುದು ಖಂಡನೀಯ.
ರೈತ ಸಮುದಾಯ, ಕಾರ್ಮಿಕ ವರ್ಗವನ್ನು ಬಜೆಟ್ ನಲ್ಲಿ ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದ್ದು ಚುನಾವಣೆಯನ್ನು ಮುಂದಿಟ್ಟುಕೊಂಡು ಕೇವಲ ಭರವಸೆಗಳಿಗಷ್ಟೇ ಬಜೆಟ್ ಘೋಷಣೆಯನ್ನು ಸೀಮಿತಗೊಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.