ಮಣಿಪಾಲ: ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಕೊಡೇರಿ ಶಿಲ್ಪಾ ಮಾಧವ ಅವರು ಅಂಗಾಂಗ ದಾನದ ಮೂಲಕ 6 ಜೀವಗಳಿಗೆ ಬೆಳಕಾಗಿದ್ದಾರೆ.
ಫೆಬ್ರವರಿ 25ರಂದು ಬೈಂದೂರು ತಾಲೂಕಿನ ಮರವಂತೆ ಬಳಿಯಲ್ಲಿ ಶಿಲ್ಪಾ ಮಾಧವ ಅವರಿಗೆ ಅಪಘಾತವಾಗಿತ್ತು. ಅವರನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ದಾಖಲಿಸಲಾಗಿತ್ತು. ಅಪಘಾತದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಅವರ ಮೆದುಳು ನಿಷ್ಕ್ರಿಯವಾಗಿತ್ತು. ಆಸ್ಪತ್ರೆಯ ನುರಿತ ವೈದ್ಯರು ಶಿಲ್ಪಾ ಅವರನ್ನು ಉಳಿಸಲು ಸಾಕಷ್ಟು ಪ್ರಯತ್ನ ನಡೆಸಿದರೂ ಅವರು ಚೇತರಿಸಿಕೊಳ್ಳಲಿಲ್ಲ. ಕೊನೆಗೆ ಪರಿಣತ ವೈದ್ಯರು ಶಿಲ್ಪಾ ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಿದರು.
ಶಿಲ್ಪಾ ಅವರ ಜೀವ ಉಳಿಸಲು ಸಾಧ್ಯವಾಗದ ವೇಳೆ ಶಿಲ್ಪಾ ಅವರ ಪತಿ ಪ್ರಸನ್ನ ಕುಮಾರ್ ಮತ್ತು ಕುಟುಂಬದ ಸದಸ್ಯರು ಅಂಗಾಂಗ ದಾನಕ್ಕೆ ಮುಂದಾದರು. ಅಂತೆಯೇ ಎರಡು ಮೂತ್ರಪಿಂಡಗಳು, ಯಕೃತ್ತು, ಚರ್ಮ ಮತ್ತು ಎರಡು ಕಾರ್ನಿಯಾಗಳನ್ನು ದಾನ ಮಾಡಲಾಯಿತು. ಈ ಮೂಲಕ ಶಿಲ್ಪಾ ಮಾಧವ ಅವರು 6 ಜೀವಗಳನ್ನು ಉಳಿಸುವ ಮೂಲಕ ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಯಕೃತ್ ಅನ್ನು ಬೆಂಗಳೂರಿನ ಅಸ್ಟರ್ ಸಿ ಎಂ ಐ ಆಸ್ಪತ್ರೆ, ಒಂದು ಮೂತ್ರಪಿಂಡವನ್ನು ಎ.ಜೆ. ಆಸ್ಪತ್ರೆ ಮಂಗಳೂರು ಮತ್ತು ಎರಡು ಕಾರ್ನಿಯಾಗಳು, ಒಂದು ಮೂತ್ರಪಿಂಡ ಹಾಗೂ ಚರ್ಮ ವನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿನ ನೋಂದಾಯಿತ ರೋಗಿಗಳಿಗೆ ಬಳಸಲಾಯಿತು.