ಮಂಗಳೂರು ನಗರದ ಪಾವೂರು ಗ್ರಾಮದ ಮಲಾರ್ ಅರಸ್ತಾನದಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆಗೈದು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ಮೇಲಿನ ಆರೋಪ ಸಾಬೀತಾಗಿದೆ. ಐವರು ಆರೋಪಿಗಳು ಕೂಡ ದೋಷಿಗಳು ಎಂದು ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಹಂಝ (44), ಅಝರುದ್ದೀನ್ (27), ಅಮೀರ್ ಶೇಖ್ ಯಾನೆ ಅಮ್ಮಿ (26), ಅರ್ಫಾಝ್ ಅಬ್ದುಲ್ ರಝಾಕ್ (20) ಅಥಾವುಲ್ಲ ಯಾನೆ ಅಲ್ತಾಫ್ ಅವರ ಮೇಲಿನ ಆರೋಪವು ಸಾಬೀತಾಗಿದೆ.
ಪಾವೂರು ಗ್ರಾಮದ ಮಲಾರ್‌ನ ಪಳ್ಳಿಯಬ್ಬ ಯಾನೆ ಪಳ್ಳಿಯಾಕ (75) ನಾಪತ್ತೆಯಾದ ಬಗ್ಗೆ 2020ರ ಅ.29ರಂದು ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಅವರ ಮೃತದೇಹವು ಇರಾ ಗ್ರಾಮದ ಪದವು ಬಳಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಹಣದ ವಿಚಾರದಲ್ಲಿ ಇವರನ್ನು ದುಷ್ಕರ್ಮಿಗಳು ಅತ್ಯಂತ ವ್ಯವಸ್ಥಿತವಾಗಿ ಹತ್ಯೆಗೈದು ಹೂತು ಹಾಕಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿತ್ತು.
ಈ ಬಗ್ಗೆ ಕೊಣಾಜೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ನ್ಯಾಯಾಧೀಶ ಬಸಪ್ಪಬಾಳಪ್ಪ ಜಕಾತಿ ಅವರು ಶಿಕ್ಷೆಯ ಪ್ರಮಾಣವನ್ನು ಮಾರ್ಚ್ 3ರಂದು ನೀಡಲಿದ್ದಾರೆ.