ಮಂಗಳೂರು, ಮಾರ್ಚ್ 02 : ಮಂಗಳೂರು ನಗರ ದಕ್ಷಿಣ ಪೊಲೀಸ್ ಠಾಣೆ ಪಾಂಡೇಶ್ವರದಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಲತಾ ಅವರನ್ನು ಪೊಲೀಸ್ ಕಮಿಷನರ್ ಅಮಾನತುಗೊಳಿಸಿದ್ದಾರೆ.
ಈ ಮೂಲಕ ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿಕೊಂಡ ಬೆನ್ನಲ್ಲೇ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಾಗಿ ಹೇಳಿದ್ದ ಕುಲದೀಪ್ ಆರ್ ಜೈನ್ ಇದೀಗ ತಾವು ನುಡಿದಂತೆ ನಡೆದುಕೊಂಡಿದ್ದಾರೆ.
ಘಟನೆಯ ವಿವರ :
ಗಂಡ ಹೆಂಡತಿ ಗಲಾಟೆ ವಿಚಾರದಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದ್ದು, ಈ ಬಗ್ಗೆ ಮಾಹಿತಿ ಪಡೆದಿದ್ದ ಪಾಂಡೇಶ್ವರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಶ್ರೀಲತಾ ಖಾಸಗಿ ವಾಹನದಲ್ಲಿ ಹೋಗಿ ಪಾರ್ಟಿಯ ಜೊತೆ ಸಂಧಾನ ನಡೆಸುವ ನೆಪದಲ್ಲಿ ವ್ಯವಹಾರ ಕುದುರಿಸಿದ್ದರು.
ಇದನ್ನು ಪ್ರತಿದೂರುದಾರರು ಗಮನಿಸಿ ವಿಡಿಯೋ ಮಾಡುತ್ತಿದ್ದಾಗ ಗಮನಿಸಿದ ಶ್ರೀಲತಾ, ಪಾಂಡೇಶ್ವರ ಠಾಣೆಯಲ್ಲಿ ತನ್ನ ಕರ್ತವ್ಯಕ್ಕೆ ಅಡ್ಡಿ ಎಂದು ದೂರು ದಾಖಲಿಸಿದ್ದರು. ಇದು ನ್ಯಾಯಕ್ಕಾಗಿ ಠಾಣೆ ಮೆಟ್ಟಲೇರಿದ ತಂಡದ ಆಕ್ರೋಶಕ್ಕೆ ಕಾರಣವಾಗಿತ್ತು. ತಮಗಾದ ಅನ್ಯಾಯದ ಬಗ್ಗೆ ಹಾಗೂ ಶ್ರೀಲತಾ ಬೇಡಿಕೆ ಇರಿಸಿದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರನ್ನು ನೀಡಲಾಗಿತ್ತು.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಡಿಸಿಪಿ ಅಂಶುಕುಮಾರ್ ತನಿಖೆಗೆ ಆದೇಶಿಸಿದ್ದರು.ಕಮಿಷನರ್ ವರ್ಗಾವಣೆಯಾದ ಬಳಿಕ ಅಧಿಕಾರ ಸ್ವೀಕರಿಸಿದ ನೂತನ ಕಮಿಷನರ್ ಕುಲದೀಪ್ ಅವರು ಮೊದಲ ಕೆಲಸವಾಗಿ ಶ್ರೀಲತಾ ಅವರನ್ನು ಅಮಾನತುಗೊಳಿಸಿದ್ದಾರೆ. ಈ ಮೂಲಕ ಇಲಾಖೆ ಒಳಗೂ- ಹೊರಗೂ ಭ್ರಷ್ಟಚಾರ ಸಹಿಸಲ್ಲ ಎಂದು ನೇರಾ ಸಂದೇಶ ರವಾನಿಸಿದ್ದಾರೆ. ಹೆಡ್ ಕಾನ್‌ಸ್ಟೇಬಲ್ ಶ್ರೀಲತಾ ವಿರುದ್ಧ ಈ ಹಿಂದೆ ಇಂತಹ ಅನೇಕ ಪ್ರಕರಣಗಳಲ್ಲಿ ಸಂಧಾನ ಮಾಡಿ ಹಣ ಮಾಡಿದ ಆರೋಪ ಕೇಳಿ ಬಂದಿತ್ತು.
ಪದೇ ಪದೇ ಭ್ರಷ್ಟಾಚಾರ ಆರೋಪಗಳು ಕೇಳಿ ಬರುತ್ತಿದ್ದವು. ಈ ಹಿಂದೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿದ್ದಾಗ ಗಂಡ ಹಂಡತಿ ಪ್ರಕರಣದಲ್ಲಿ ಇದೇ ರೀತಿ ಗಲಾಟೆ ಆಗಿ ರಾಧಾಂತವಾಗಿತ್ತು. ಬಳಿಕ ಠಾಣೆಯಲ್ಲಿದ್ದ ಸಿಸಿಟಿವಿ ಫೂಟೇಜ್‌ಗಳನ್ನೆಲ್ಲಾ ಶ್ರೀಲತಾ ಡಿಲೀಟ್ ಮಾಡಿಸಿದ್ದರು. ಅಷ್ಟೇ ಅಲ್ಲದೆ ತನ್ನ ಕರ್ತವ್ಯಕ್ಕೆ ಅಡ್ಡಿ ಎಂದು ದೂರುದಾರರ ಮೇಲೆ ಪ್ರಕರಣ ದಾಖಲಿಸಿದ್ದರು.
ಹಾಸನ ಜಿಲ್ಲೆಯ ಆಲೂರು ನಂದಿಪುರ ಎಸ್ಟೇಟ್ ರೆಸಾರ್ಟ್‌ನಲ್ಲಿ 2021ರ ಏಪ್ರಿಲ್ 9ರಂದು ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿದ್ದ ಶ್ರೀಲತಾ ಸೇರಿದಂತೆ 130 ಮಂದಿ ಯುವಕ ಯುವತಿಯರನ್ನು ಬಂಧಿಸಲಾಗಿತ್ತು.
ಪಾರ್ಟಿಯನ್ನು ಆಯೋಜನೆ ಮಾಡಿದ್ದ ಈಕೆ ಪುತ್ರ ಅತುಲ್ ಅಂದು ಪರಾರಿಯಾಗಿದ್ದ. ದಾಳಿ ಸಂದರ್ಭದಲ್ಲಿ ಭಾರೀ ಪ್ರಮಾಣದ ಮದ್ಯದ ಬಾಟಲಿಗಳು, ಮಾದಕ ವಸ್ತುಗಳು ಪತ್ತೆಯಾಗಿದ್ದವು. ಗಾಂಜಾ, ಅಫೀಮು, ಎಂಡಿಎಂಎ ಅಕ್ರಮ ಮಾರಾಟವನ್ನು ಪತ್ತೆ ಹಚ್ಚುವ ಕೆಲಸವನ್ನು ಮಾಡಬೇಕಾಗಿದ್ದ ಓರ್ವ ಪೊಲೀಸ್ ಅಧಿಕಾರಿಯೇ ರೇವ್ ಪಾರ್ಟಿ ಆಯೋಜನೆ ಮಾಡಿದ್ದು, ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿತ್ತು.