ಉಡುಪಿ: ಕಾರ್ಕಳದ ಸಚಿವ ವಿ. ಸುನಿಲ್ ಕುಮಾರ್ ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬೇನಾಮಿ ಆಸ್ತಿ ಆರೋಪ ಮಾಡಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಚುನಾವಣೆ ಘೋಷಣೆ ಆಗುವ ಮೊದಲೇ ಕಾರ್ಕಳದಲ್ಲಿ ಮುತಾಲಿಕ್ ಮತ್ತು ಸುನಿಲ್ ಕುಮಾರ್ ನಡುವೆ ಆರೋಪ ಪ್ರತ್ಯಾರೋಪಗಳು ಶುರುವಾಗಿದೆ. ಎರಡು ತಿಂಗಳಿನಿಂದ ಮುತಾಲಿಕ್ ನಿರಂತರವಾಗಿ ಸುನಿಲ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ನಕಲಿ ಹಿಂದುತ್ವ, ಭ್ರಷ್ಟಾಚಾರ ಅಂತಾ ಆರೋಪಿಸುತ್ತಿದ್ದವರು ಇದೀಗ ಬೇನಾಮಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪ ಮಾಡಿದ್ದಾರೆ.
ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಶಿವಪುರ ಕೆರೆಕಟ್ಟೆ ಗ್ರಾಮದಲ್ಲಿ 67 ಎಕರೆ ಕೃಷಿ ಭೂಮಿಯನ್ನು ಬೇನಾಮಿ ಹೆಸರಿನಲ್ಲಿ ಬೇರೆ ಬೇರೆ ರೈತರಿಂದ ಖರೀದಿ ಮಾಡಿದ್ದಾರೆ. ಮುಂದೆ ಅದು ಕೈಗಾರಿಕಾ ಪ್ರದೇಶವಾಗಿ ಭೂ ಪರಿವರ್ತನೆ ಮಾಡಿ 4-5 ಪಟ್ಟು ಹೆಚ್ಚಿನ ಬೆಲೆಗೆ ಸರ್ಕಾರ ಖರೀದಿ ಮಾಡುತ್ತದೆ. 4 ಚಿಲ್ಲರೆ ಕೋಟಿಗೆ ಖರೀದಿಸುವ ಮೂಲಕ ಜಮೀನು ಹೊಂದಿರುವ ಬಡ ರೈತರಿಗೂ ಅನ್ಯಾಯ ಆಗಿದೆ. ಇದರಲ್ಲಿ ಶಾಸಕ, ರಾಜ್ಯದ ಪ್ರಭಾವಿ ಮಂತ್ರಿಗಳ ಕೈವಾಡ ಇದೆ ಎಂದು ಮುತಾಲಿಕ್ ಆರೋಪ ಮಾಡಿದ್ದಾರೆ.
ವಿದ್ಯಾ ಸುವರ್ಣ- ಗಜಾನಂದ ದಂಪತಿ ಕಾರ್ಕಳದ ಬಿಜೆಪಿಯ ಕಾರ್ಯಕರ್ತರು. ಹೆಬ್ರಿ ತಾಲೂಕಿನಲ್ಲಿ ಕಡಿಮೆ ಹಣ ಕೊಟ್ಟು ರೈತರ ಕೃಷಿ ಭೂಮಿಯನ್ನು ಈ ಇಬ್ಬರು ಖರೀದಿ ಮಾಡಿದ್ದಾರೆ. ಸ್ಥಳೀಯ ಶಾಸಕ ಪ್ರಭಾವಿ ಮಂತ್ರಿ ಈ ಅವ್ಯವಹಾರದ ಹಿಂದೆ ಇದ್ದಾರೆ ಎಂದು ಸುನಿಲ್ ಕುಮಾರ್ ಹೆಸರು ಹೇಳದೇ ಆರೋಪಿಸಿದ್ದಾರೆ. ಆದರೆ ದೂರಿನಲ್ಲಿ ಸಚಿವರ ಹೆಸರು ಉಲ್ಲೇಖಿಸಿದ್ದಾರೆ.
ಜಿಲ್ಲಾಧಿಕಾರಿ ಕೂರ್ಮರಾವ್ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿದ ಮತದಾರರು ಒಂದು ವಾರದ ಒಳಗೆ ಈ ಬಗ್ಗೆ ತನಿಖೆ ನಡೆಸಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.