ಮಂಗಳೂರು: ನಗರದ ಸೌಂದರ್ಯವರ್ಧನೆಗೆ ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತದೆ. ಇಂತಹ ಸೌಂದರ್ಯ ಪ್ರಜ್ಞೆಯಿಂದಲೇ ನಿರ್ಮಾಣವಾಗಿರುವುದು ಮಂಗಳೂರಿನ ಹೃದಯಭಾಗದಲ್ಲಿರುವ ಕ್ಲಾಕ್ ಟವರ್. ಆದರೆ ಇದೀಗ ಈ ಕ್ಲಾಕ್ ಟವರ್ ಸೂಕ್ತ ನಿರ್ವಹಣೆಯಿಲ್ಲದೆ ದುಃಸ್ಥಿತಿ ತಲುಪಿದೆ. ಇಲ್ಲಿ ಕಾಣುತ್ತಿರುವುದೇ ಕ್ಲಾಕ್ ಟವರ್. ಮಂಗಳೂರಿನ ಸೌಂದರ್ಯಕ್ಕೆ ಹಿಡಿದ ಕನ್ನಡಿಯಂತಿರುವ ಇದು 2018ರಲ್ಲಿ ನಿರ್ಮಾಣಗೊಂಡಿತು. ಸ್ಮಾರ್ಟ್ ಸಿಟಿ ಕಾಮಗಾರಿಯಡಿಯಲ್ಲಿ ಅತ್ಯಂತ ದುಬಾರಿ ವೆಚ್ಚದಲ್ಲಿ ನಿರ್ಮಾಣಗೊಂಡಿತು.
ಇತ್ತೀಚೆಗಷ್ಟೇ ಇದರ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನು ಅಧಿಕೃತವಾಗಿ ಲೋಕಾರ್ಪಣೆಯೂ ಆಗಿಲ್ಲ. ಆದರೆ ಅದಾಗಲೇ ಕ್ಲಾಕ್ ಟವರ್ ಸರಿಯಾದ ನಿರ್ವಹಣೆಯಿಲ್ಲದೆ ದುಃಸ್ಥಿತಿಯನ್ನು ತಲುಪಿದೆ. ಕ್ಲಾಕ್ ಟವರ್‌ನ ಕಾರಂಜಿ ಚಾಲನೆಯಲ್ಲಿಲ್ಲ. ಸುತ್ತಲಿನ ಗಾರ್ಡನ್‌ಗೂ ನೀರು ಸರಬರಾಜು ಇಲ್ಲದೆ ಗಿಡಗಳು ಸೊರಗಿ ಹೋಗಿದೆ. 75 ಅಡಿ ಎತ್ತರದ ಕ್ಲಾಕ್ ಟವರ್‌ನ ಸುತ್ತಲೂ ನಾಲ್ಕು ಬೃಹತ್ ಗಡಿಯಾರಗಳಿವೆ. ರಾತ್ರಿ ವೇಳೆ ಸುಂದರ ವಿದ್ಯುತ್ ವ್ಯವಸ್ಥೆ ಹಾಗೂ ವರ್ಣ ರಂಜಿತ ಕಾರಂಜಿ ಕ್ಲಾಕ್ ಟವರ್‌ನ ಮೆರುಗನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು. ಕಾಮಗಾರಿ ಬಳಿಕ ಸ್ಮಾರ್ಟ್ ಸಿಟಿ ನಿರ್ವಹಣೆಗೆ ಮಹಾನಗರ ಪಾಲಿಕೆಗೆ ಹಸ್ತಾಂತರಮಾಡಿತ್ತು. ಆದರೆ ಪಾಲಿಕೆ ನಿರ್ವಹಣೆ ಮಾಡದೇ ನಿರ್ಲಕ್ಷ್ಯ ತೋರಿದೆ. ಬೃಹತ್ ಗಡಿಯಾರಗಳು ವಿದ್ಯುತ್‌ನಿಂದ ಕಾರ್ಯ ನಿರ್ವಹಿಸುತ್ತದೆ. ಆದರೆ ಇದರ ಬಿಲ್ ಪಾವತಿಯಾಗದ ಹಿನ್ನೆಲೆ ಕೆಲ ದಿನಗಳ ಹಿಂದೆ ಮೆಸ್ಕಾಂ ಇದರ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ಇದೀಗ ಬಿಲ್ ಪಾವತಿಯಾದ ಕಾರಣ ಗಡಿಯಾರದ ಮುಳ್ಳು ಮತ್ತೆ ಸುತ್ತುವುದಕ್ಕೆ ಆರಂಭಿಸಿದೆ. ಆದರೆ ಸರಿಯಾದ ನಿರ್ವಹಣೆಯಿಲ್ಲದೆ ಕ್ಲಾಕ್ ಟವರ್ ತನ್ನ ಸೌಂದರ್ಯ ಕಳೆದುಕೊಂಡು ಸೊರಗುತ್ತಿದೆ. ಆದ್ದರಿಂದ ಆದಷ್ಟು ಶೀಘ್ರ ಪಾಲಿಕೆ ಅಧಿಕಾರಿಗಳು ಕ್ಲಾಕ್ ಟವರ್ ನಿರ್ವಹಣೆಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿಬೇಕಿದೆ.