ಲಕ್ನೋ: ವಿಮಾನದಲ್ಲಿ ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಸುದ್ದಿಯಾದ ಬಳಿಕ ಅಂಥದ್ದೇ ಮತ್ತೊಂದು ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಇತ್ತೀಚೆಗೆ ನಡೆದಿರುವುದು ಬೆಳಕಿಗೆ ಬಂದಿದೆ.
ಭಾನುವಾರ (ಮಾ.12 ರಂದು) ಅಮೃತಸರದಿಂದ ಕೋಲ್ಕತ್ತಾಕ್ಕೆ ತೆರಳುವ ರೈಲಿನಲ್ಲಿ ಈ ಘಟನೆ ನಡೆದಿದ್ದು, ಅಕಾಲ್ ತಖ್ತ್ ಎಕ್ಸ್ಪ್ರೆಸ್ ರೈಲಿನಲ್ಲಿ ಮಹಿಳೆ ತನ್ನ ಪತಿ ರಾಜೇಶ್ ಕುಮಾರ್ ಅವರೊಂದಿಗೆ ಇದ್ದರು.
ದಂಪತಿಗಳು ಎ1 ಕೋಚ್ ನಲ್ಲಿದ್ದರು. ಮಧ್ಯರಾತ್ರಿ ರೈಲಿನ ಟಿಕೆಟ್ ಪರಿವೀಕ್ಷಕ (ಟಿಟಿಇ) ಬಿಹಾರ ಮೂಲದ ಮುನ್ನಾ ಕುಮಾರ್ ಕುಡಿದ ಮತ್ತಿನಲ್ಲಿ ಮಹಿಳೆಯ ತಲೆಯ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ ಹೇಳಿದ್ದಾರೆ.
ಟಿಟಿಇಯ ಅಸಭ್ಯ ವರ್ತನೆಗೆ ಮಹಿಳೆ ಕಿರುಚಿದ್ದಾರೆ. ಈ ವೇಳೆ ಎಚ್ಚೆತ ಇತರ ಪ್ರಯಾಣಿಕರು ಒಟ್ಟು ಸೇರಿ ಕುಡಿದು ಟೈಟಾಗಿದ್ದ ಮುನ್ನಾ ಕುಮಾರ್ ನನ್ನು ಹಿಡಿದು ಥಳಿಸಿದ್ದಾರೆ. ಸೋಮವಾರ ರೈಲು ಲಕ್ನೋದ ಚಾರ್ಬಾಗ್ ರೈಲು ನಿಲ್ದಾಣವನ್ನು ತಲುಪಿದಾಗ ಟಿಟಿಇಯನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.