ಮಂಗಳೂರು: ವಿಧಾನಸಭಾ ಚುನಾವಣೆ ಸದ್ಯದಲ್ಲೇ ಘೋಷಣೆಯಾಗುವ ಸಾಧ್ಯತೆಯಿದೆ. ಆದ್ದರಿಂದ ನಿಷ್ಪಕ್ಷ ಚುನಾವಣೆ ನಡೆಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಅದೇರೀತಿ ಸಾರ್ವಜನಿಕರ ಸಭೆ ಸಮಾರಂಭಗಳ ಮೇಲೆ ನಿಗಾ ಇರಿಸುವಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಅನುಮತಿ ಪಡೆಯದೆ ಹಾಕಲಾಗಿರುವ ಬ್ಯಾನರ್- ಬಂಟಿಂಗ್ಸ್ ಮತ್ತು ಫ್ಲೆಕ್ಸ್, ಗೋಡೆ ಬರಹ ಮತ್ತು ಇತರ ಜಾಹೀರಾತುಗಳನ್ನು ತೆರವುಗೊಳಿಸಿ ಪ್ರತೀ ದಿನ ವರದಿ ಸಲ್ಲಿಸಬೇಕು ಎಂದು ಸೂಚಿಸಿರುವ ಜಿಲ್ಲಾಧಿಕಾರಿ, ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯದೆ ರಾಜಕೀಯ ಪಕ್ಷ ಮತ್ತು ರಾಜಕೀಯ ವ್ಯಕ್ತಿಗಳು ಸಾರ್ವಜನಿಕ ಔತಣಕೂಟ ಏರ್ಪಡಿಸುವಂತಿಲ್ಲ. ಒಂದು ವೇಳೆ ಉಲ್ಲಂಘಿಸಿದಲ್ಲಿ ಸ್ಥಳೀಯ ಪ್ರಾಧಿಕಾರಗಳು, ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಐಪಿಸಿ ಕಲಂ 171 ರಡಿಯಲ್ಲಿ ಹಾಗೂ ಸಂಬಂಧಪಟ್ಟ ಇತರ ಕಾಯ್ದೆಗಳ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಯಾವುದೇ ಸಭಾ ಕಾರ್ಯಕ್ರಮಕ್ಕೆ ಅನುಮತಿ ನೀಡುವಾಗ ಸಭೆ ಮುಕ್ತಾಯವಾದ ಅನಂತರ ಬ್ಯಾನರ್ -ಬಂಟಿಂಗ್ ತೆರವುಗೊಳಿಸಲು ಸೂಚಿಸಬೇಕು. ಕಾನೂನು ಸುವ್ಯವಸ್ಥೆ, ಸಾಮಾಜಿಕ ಅಶಾಂತಿ ಹಾಗೂ ಶಬ್ದಮಾಲಿನ್ಯ ಉಂಟುಮಾಡುವ ಯಾವುದೇ ಚಟುವಟಿಕೆ ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಕೊಂಡು ಜಿಲ್ಲಾಡಳಿತಕ್ಕೆ ವರದಿ ನೀಡಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಇದಕ್ಕೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿದಿನ ತಮ್ಮ ನೇತೃತ್ವದಲ್ಲಿ ಮೇಲು ಉಸ್ತುವಾರಿ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಬೇಕು. ಈ ಕುರಿತ ವರದಿ ಪ್ರತಿದಿನ ಮತ್ತು ಒಟ್ಟಾರೆ ಮಾಹಿತಿ ಪ್ರತೀ ಶನಿವಾರ ಜಿ.ಪಂ. ಸಿಇಒ ಅವರಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.