ಮಂಗಳೂರು: ರಬ್ಬರ್ ಪ್ಲ್ಯಾಂಟೇಷನ್ ಟ್ಯಾಪರ್ ಗಳಿಗೆ ನೀಡುವ ಬೋನಸ್ ಅನ್ನು 12% ಹೆಚ್ಚುವರಿ ಮಾಡಿ ಒಟ್ಟು 20% ಬೋನಸ್ ಅನ್ನು ಇಂದು ಮಂಗಳೂರಿನಲ್ಲಿ ನಡೆದ ಫಲಾನುಭವಿಗಳ ಸಭೆಯಲ್ಲಿಯೇ ಘೋಷಣೆ ಮಾಡಿದರು. ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿಯರು, ರಬ್ಬರ್ ಪ್ಲ್ಯಾಂಟೇಷನ್ ಟ್ಯಾಪರ್ ಗಳಿಗೆ ನೀಡುವ ಬೋನಸ್ ಅನ್ನು 8%ನಿಂದ 12%ಗಳಿಗೆ ಏರಿಕೆ ಮಾಡಲಾಗುತ್ತದೆ ಎಂದು ಘೋಷಿಸುತ್ತಿದ್ದರು. ಈ ವೇಳೆ ಸಚಿವ ಅಂಗಾರ ವೇದಿಕೆಯಲ್ಲಿಯೇ ಅದನ್ನು 20%ಗೆ ಏರಿಕೆ ಮಾಡಬೇಕೆಂದು ಸಿಎಂಗೆ ಮನವಿ ಮಾಡಿದರು. ಅವರ ಮನವಿಗೆ ಅಸ್ತು ಎಂದ ಸಿಎಂ ಬೋನಸ್ ಅನ್ನು 12% ಏರಿಕೆ ಮಾಡಿ ಒಟ್ಟು 20% ಬೋನಸ್ ಕೊಡುವುದಕ್ಕೆ ತೀರ್ಮಾನಿಸಿದ್ದೇನೆ ಎಂದು ಫಲಾನುಭವಿಗಳ ಸಭೆಯಲ್ಲಿಯೇ ಘೋಷಣೆ ಮಾಡಿದರು. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗೆ ಯಾವ ಬೆಲೆಯಿಲ್ಲ. ಅದನ್ನು ಬ್ಯಾಂಕ್ ನಲ್ಲಿ ಇಡುವುದಕ್ಕೆ ಆಗುತ್ತಾ. ಉಪ್ಪಿನಕಾಯಿ ಹಾಕಿ ನಕ್ಕೋಕೆ ಆಗುತ್ತದೆ. ಗ್ಯಾರಂಟಿ ಕಾರ್ಡ್ ವಿಸಿಟಿಂಗ್ ಕಾರ್ಡ್ ಅಷ್ಟೇ. ರಾಜ್ಯದ ಜನತೆ ಆ ಕಾರ್ಡ್ ನ್ನು ಡಸ್ಟ್ ಬೀನ್ ಗೆ ಹಾಕುತ್ತಾರೆ ಎಂದು ಸಿಎಂ ಬೊಮ್ಮಾಯಿಯವರು ಲೇವಡಿ ಮಾಡಿದರು. ಕಾಂಗ್ರೆಸ್ ನವರು ಆಗದಿರುವುದನ್ನು ಹೇಳಿ ಜನರನ್ನು ನಂಬಿಸುತ್ತಿದ್ದಾರೆ. 2 ಸಾವಿರ ಕೋಟಿ ಅನುದಾನಕ್ಕೆ ತಿಂಗಳಿಗೆ 20 ಸಾವಿರ ಕೋಟಿ ಬೇಕಾಗುತ್ತದೆ. ಹಣ ಕೊಟ್ಟರೆ ಎಲ್ಲಾ ಯೋಜನೆಗಳು ಬಂದ್ ಆಗುತ್ತದೆ. ಛತ್ತಿಸ್ ಗಢದಲ್ಲಿ ಇದೇ ರೀತಿಯ ಹೇಳಿಕೆ ಕೊಟ್ಟು 4 ವರ್ಷಗಳಾದರೂ ಕೊಟ್ಟಿಲ್ಲ. 200 ಯುನಿಟ್ ಉಚಿತ ವಿದ್ಯುತ್ ಅನ್ನೂ ಕೊಡುವುದಿಲ್ಲ. ಜನರನ್ನು ಯಾಮಾರಿಸುತ್ತಾರೆ. ಎಲ್ಲಾ ಸಂದರ್ಭಗಳಲ್ಲೂ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ ಎಂದರು. ಕೇಂದ್ರ ಸರ್ಕಾರ ಅನ್ನದಾತ ರೈತನಿಗೆ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೊಳಿಸಿದೆ. ಮೋದಿ ಬರುವುದಕ್ಕಿಂತ ಮೊದಲು ಈ ಯೋಜನೆ ಇರಲಿಲ್ಲ. ಯುಪಿಎ ಸರ್ಕಾರ ಇದರ ದೊಡ್ಡ ದೊಡ್ಡ ಬ್ಯಾನರ್ ಗಳನ್ನು ಹಾಕುತ್ತಿದ್ದರು. ಆದರೆ ಯುಪಿಎ ಸರ್ಕಾರದ ಕಾಲದಲ್ಲಿ 85% ಮಧ್ಯವರ್ತಿಗಳ ಪಾಲಾಗುತಿತ್ತು. ಯುಪಿಎ ಕಾಲದಲ್ಲಿ 85% ಸರ್ಕಾರ ನಡೆಯುತಿತ್ತು. ಈಗ ಮಧ್ಯವರ್ತಿಗಳೇ ಇಲ್ಲದೇ ನೇರವಾಗಿ ಫಲಾನುಭವಿಗಳ ಖಾತೆಗೆ ಅನುದಾನ ಹೋಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.