ಮುಂಬೈ: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟಿದ್ದು, ಆತನ ಪತ್ನಿಯು ಮರುಮದುವೆಯಾಗಿರುವ ವಿಷಯವು ಮೋಟಾರು ವಾಹನ ಕಾಯ್ದೆಯಡಿ ಆಕೆಗೆ ಪರಿಹಾರ ನಿರಾಕರಣೆಗೆ ಕಾರಣವಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
2010ರಲ್ಲಿ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಪತ್ನಿಗೆ ಪರಿಹಾರ ನೀಡುವಂತೆ ಮೋಟಾರು ಅಪಘಾತ ಹಕ್ಕು ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಇಪ್ಕೊ ಟೋಕಿಯೊ ಜನರಲ್ ಇನ್ಶೂರೆನ್ಸ್ ಕಂಪನಿಯು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತ್ತು.
ನ್ಯಾ. ಎಸ್.ಜಿ.ಡಿಗೆ ನೇತೃತ್ವದ ಏಕಸದಸ್ಯ ನ್ಯಾಯಪೀಠ ಮಾ.3ರಂದು ಅರ್ಜಿಯ ವಿಚಾರಣೆ ನಡೆಸಿದ್ದು, ವಿಮಾ ಕಂಪನಿಯ ಅರ್ಜಿಯನ್ನು ವಜಾಗೊಳಿಸಿದೆ.
ಪತಿಯ ಸಾವಿಗೆ ಪರಿಹಾರ ಪಡೆಯಲು ಆತನ ಪತ್ನಿಯು ಜೀವನಪರ್ಯಂತ ಅಥವಾ ಪರಿಹಾರ ಪಡೆಯುವವರೆಗೆ ವಿಧವೆಯಾಗಿ ಉಳಿಯಬೇಕು ಎಂಬುದನ್ನು ಯಾರೂ ನಿರೀಕ್ಷಿಸುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಈ ರಸ್ತೆ ಅಪಘಾತವಾದಾಗ ಮೃತರ ಪತ್ನಿಯು 19 ವರ್ಷ ವಯಸ್ಸಿನವರಾಗಿದ್ದರು.