ಚೆನ್ನೈ: ದಾರುಣ ಘಟನೆಯೊಂದರಲ್ಲಿ ಐವರು ಇಂದು ಚೆನ್ನೈನ ದೇವಸ್ಥಾನದ ಬಳಿಯ ಸಾರ್ವಜನಿಕ ಕಲ್ಯಾಣಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂಗನಲ್ಲೂರಿನ ಧರ್ಮಲಿಂಗೇಶ್ವರ ದೇವಸ್ಥಾನದ ಭಕ್ತರು ಪಂಗುನಿ ಆಚರಣೆಯ ಅಂಗವಾಗಿ ಧಾರ್ಮಿಕ ಕ್ರಿಯೆಗಳಿಗಾಗಿ ತೊಟ್ಟಿಯಲ್ಲಿ ಜಮಾಯಿಸಿದಾಗ ಬೆಳಿಗ್ಗೆ 10.30 ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.
‘ಮೊದಲಿಗೆ ಒಬ್ಬರು ಜಾರಿಬಿದ್ದರು, ಮತ್ತು ನಂತರ ಅವರನ್ನು ರಕ್ಷಿಸಲು ಪ್ರಯತ್ನಿಸಿದವರೂ ನೀರಿನಲ್ಲಿ ಮುಳುಗಿದರು. ಪ್ರೋಟೋಕಾಲ್ಗಳನ್ನು ಅನುಸರಿಸಲಾಗಿದೆಯೇ ಎಂಬುದರ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ’ ಎಂದು ಚೆನ್ನೈ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಹೇಳಿದ್ದಾರೆ. ಪೊಲೀಸರ ಪ್ರಕಾರ, ಎಲ್ಲಾ ಐದು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ ಅಂತ ತಿಳಿಸಿದ್ದಾರೆ. ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ಟ್ಯಾಂಕ್‌ನಲ್ಲಿ ತಮ್ಮ ಶೋಧ ಕಾರ್ಯಾಚರಣೆಯನ್ನು ಮುಂದುವರೆಸುತ್ತಿವೆ ಎಂದು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಡಿಜಿಪಿ ಅಭಾಷ್ ಕುಮಾರ್ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ನೀರಿನಲ್ಲಿ ಮುಳುಗಿದ ಐವರೂ ಚೆನ್ನೈನ ಮೂರು ವಿಭಿನ್ನ ಪ್ರದೇಶಗಳಿಗೆ ಸೇರಿದವರು ಎನ್ನಲಾಗಿದೆ.