ಮಂಗಳೂರು: ಮಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ಅವರ ನೂತನ ಚುನಾವಣಾ ಕಚೇರಿಯನ್ನು ಏಪ್ರಿಲ್ 17 ಸೋಮವಾರ ಕದ್ರಿ-ನಂತೂರು ರಸ್ತೆಯಲ್ಲಿರುವ ಒರೇನಿಯ ವಾಣಿಜ್ಯ ಸಂಕೀರ್ಣದಲ್ಲಿ ಉದ್ಘಾಟಿಸಲಾಯಿತು.
ಪಕ್ಷದ ಕಾರ್ಯಕರ್ತರಾದ ಪದ್ಮನಾಭ್ ಅಮೀನ್, ಸದಾಶಿವ ಅಮೀನ್ ಅವರು ಇತರ ಗಣ್ಯರೊಂದಿಗೆ ದೀಪ ಬೆಳಗಿಸಿ ವಿಧ್ಯುಕ್ತವಾಗಿ ಉದ್ಘಾಟಿಸಿದರು.ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎಸ್.ಮಸೂದ್ ಮಾತನಾಡಿ, ಜೆ.ಆರ್.ಲೋಬೊ ಅವರನ್ನು ಶಾಸಕರನ್ನಾಗಿ ಮಾಡಲು ಪಕ್ಷದ ಎಲ್ಲ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಬೇಕು, ಜಾತಿ, ಧರ್ಮದ ಭೇದವಿಲ್ಲದೆ ಲೋಬೊ ಅವರ ಗೆಲುವಿಗೆ ಎಲ್ಲರೂ ಅವಿರತವಾಗಿ ಶ್ರಮಿಸಬೇಕು ಎಂದರು.ಈ ವೇಳೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ, ಸಂವಿಧಾನ ಉಳಿಸಲು ಹಾಗೂ ಸಮಾಜದಲ್ಲಿ ಶಾಂತಿ-ಕಾನೂನು ಸುವ್ಯವಸ್ಥೆ ಕಾಪಾಡಲು ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಜನರು ಚುನಾವಣೆಯಲ್ಲಿ ಆದ್ಯತೆ ನೀಡಬೇಕು ಎಂದರು. ನಗರದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳಿದ್ದರೂ ಯುವಕರು ಉದ್ಯೋಗದಿಂದ ವಂಚಿತರಾಗಿದ್ದಾರೆ. ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ಮತ್ತು ಅಭಿವೃದ್ಧಿಗಾಗಿ ಜನರು ಬದಲಾವಣೆ ತಂದು ರಾಜ್ಯದಲ್ಲಿ ಉತ್ತಮ ಸರ್ಕಾರವನ್ನು ಆಯ್ಕೆ ಮಾಡಬೇಕು ಎಂದರು. ಪಂಡಿತ್ ವಿಶ್ವನಾಥ ಭಟ್, ರಿಯಾಜ್ ಫೈಝಿ ಕಕ್ಕಿಂಜೆ, ಫಾದರ್ ರೋನ್ಸನ್ ಪಿಂಟೋ ಆಶೀರ್ವಚನ ನೀಡಿದರು.