ಮುಂಬೈ: ಹಣಕಾಸು ಬಿಕ್ಕಟ್ಟಿನ ಕಾರಣ ‘ಗೋ ಫಸ್ಟ್’ ವಿಮಾನಯಾನ ಕಂಪನಿಯು ಮೇ. 12ರವರೆಗೆ ತನ್ನ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ತಿಳಿಸಿದೆ.
ಕಾರ್ಯಾಚರಣೆಯ ಕಾರಣಗಳಿಂದಾಗಿ 2023 ರ ಮೇ 12 ರವರೆಗೆ ನಿಗದಿಯಾಗಿದ್ದ ಎಲ್ಲಾ ಗೋ ಫಸ್ಟ್ ವಿಮಾನಗಳ ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಟ್ವೀಟ್‌ನಲ್ಲಿ ತಿಳಿಸಿದೆ. ವಾಡಿಯಾ ಸಮೂಹ-ಮಾಲೀಕತ್ವದ ವಿಮಾನಯಾನ ಕಂಪನಿ, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಮುಂದೆ ಸ್ವಯಂಪ್ರೇರಿತ ದಿವಾಳಿತನ ಪರಿಹಾರ ಪ್ರಕ್ರಿಯೆಗಾಗಿ ಮನವಿ ಸಲ್ಲಿಸಿತ್ತು ಮತ್ತು ನ್ಯಾಯಮಂಡಳಿ ಮೇ.4 ರಂದು ತನ್ನ ಆದೇಶವನ್ನು ಕಾಯ್ದಿರಿಸಿತು.
ಆರಂಭದಲ್ಲಿ ಮೇ 3 ರಿಂದ ಎಲ್ಲಾ ವಿಮಾನಗಳ ಸೇವೆಯನ್ನು ‘ಗೋ ಫಸ್ಟ್’ ವಿಮಾನಯಾನ ಕಂಪನಿ ರದ್ದುಗೊಳಿಸಿತ್ತು. ನಂತರ ನಂತರ ಅದನ್ನು ಮೇ 9 ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಮತ್ತೆ ಮೇ 12 ರವರೆಗೆ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ವಿಮಾನಯಾನ ಸಂಸ್ಥೆಯು ಮೇ 15 ರವರೆಗೆ ಟಿಕೆಟ್‌ಗಳ ಮಾರಾಟವನ್ನು ಸ್ಥಗಿತಗೊಳಿಸಿದೆ ಎಂದು ವಿಮಾನಯಾನ ನಿಯಂತ್ರಕ ಡಿಜಿಸಿಎ ಗುರುವಾರ ಹೇಳಿತ್ತು. ಸಂಬಂಧಿತ ನಿಯಮಾವಳಿಗಳಲ್ಲಿ ಪ್ರಯಾಣಿಕರಿಗೆ ಮರುಪಾವತಿ ಪ್ರಕ್ರಿಯೆ ಕೈಗೊಳ್ಳುವಂತೆ ಡಿಜಿಸಿಎ ವಿಮಾನಯಾನ ಸಂಸ್ಥೆಗೆ ನಿರ್ದೇಶನ ನೀಡಿದೆ.