ಕೇರಳದ ಮಲಪ್ಪುರಂ ಜಿಲ್ಲೆಯ ತಾನೂರು ಬಳಿ ಪ್ರವಾಸಿ ದೋಣಿಯೊಂದು ಮುಳುಗಿ 21 ಮಂದಿ ಸಾವನ್ನಪ್ಪಿದ್ದಾರೆ. ದುರ್ಘಟನಾ ಸ್ಥಳದಲ್ಲಿ ಇನ್ನೂ ಹಲವರು ನೀರಿನಲ್ಲಿ ಮುಳುಗಿದ್ದು, ರಕ್ಷಣಾಕಾರ್ಯ ಭರದಿಂದ ಸಾಗುತ್ತಿದೆ.
ವರದಿಗಳ ಪ್ರಕಾರ ದೋಣಿಯಲ್ಲಿ ಸುಮಾರು 40 ಮಂದಿ ಇದ್ದರು. ನಿನ್ನೆ ರಾತ್ರಿ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಹೀಗಿದ್ದೂ, ಟಾರ್ಚ್ಗಳ ಸಹಾಯದಿಂದ ಹಲವರನ್ನು ರಕ್ಷಣೆ ಮಾಡಲಾಗಿದೆ.
ರಕ್ಷಣಾ ಕಾರ್ಯ ನಡೆಯುತ್ತಿದೆ. ರಾತ್ರಿ ಅಪಘಾತ ಸಂಭವಿಸಿದ್ದರಿಂದ ರಕ್ಷಣೆ ಮಾಡಲು ಕಷ್ಟವಾಗಿದೆ ಎಂದು ಕೇರಳ ಸಚಿವ ಅಬ್ದುರಹ್ಮಾನ್ ತಿಳಿಸಿದ್ದಾರೆ. ಇಂದು ಘಟನಾ ಸ್ಥಳಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿ ನೀಡಲಿದ್ದಾರೆ. ದುರಂತ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳು ರದ್ದು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದ ಕೂಡ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ. ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಕೂಡ ದುರ್ಘಟನೆಗೆ ಕಂಬನಿ ಮಿಡಿದಿದ್ದಾರೆ.