ಬೆಂಗಳೂರು: ಕಾಂಗ್ರಸ್ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ವಿಧಾನಸಭಾ ಚುನಾವಣೆಯಲ್ಲಿ ಸರ್ಕಾರ ರಚಿಸುವತ್ತ ದಾಪುಗಾಲಿಟ್ಟಿದೆ. ಈ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ಈ ಕುರಿತಂತೆ ಟ್ವಿಟ್ ನಲ್ಲಿ ಮಾಹಿತಿ ನೀಡಿರುವಂತ ಬಸವರಾಜ ಬೊಮ್ಮಾಯಿ ಅವರು, ಕರ್ನಾಟಕದ ಜನತೆಯ ತೀರ್ಪನ್ನು ಗೌರವಿಸಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದೆನು. ನನ್ನ ಮುಖ್ಯಮಂತ್ರಿ ಅವಧಿಯಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ನನ್ನ ಹೃದಯಾಂತರಾಳದಿಂದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
ಬಸವರಾಜ ಬೊಮ್ಮಾಯಿಯವರು ಇಂದು ರಾಜ್ಯಪಾಲ ಥಾವರಚಂದ ಗೆಲ್ಹೋತ್ ಅವರನ್ನು ಭೇಟಿ ಮಾಡಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಬೈರತಿ ಬಸವರಾಜ್, ಸುರೇಶ್ ಕುಮಾರ್ , ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹಾಜರಿದ್ದರು.
ಅಂದಹಾಗೇ, ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ನಡೆದಂತ ಮತದಾನ ಮತಎಣಿಕೆ ಕಾರ್ಯ ಇಂದು ನಡೆಯಿತು. ಕಾಂಗ್ರೆಸ್ ಸ್ಪಷ್ಟ ಬಹುಮತದ ಮೂಲಕ ಸರ್ಕಾರ ರಚನೆಯತ್ತ ದಾಪುಗಾಲು ಇಟ್ಟಿದೆ. 224 ಕ್ಷೇತ್ರಗಳಲ್ಲಿ ಮ್ಯಾಜಿಕ್ ನಂಬರ್ 113ರ ಗಡಿದಾಟಿ 136 ಸೀಟುಗಳನ್ನು ಗೆದ್ದಿದೆ.
ಚುನಾವಣಾ ಆಯೋಗದ ಮಾಹಿತಿಯಂತೆ ಬಿಜೆಪಿ 65 ಕ್ಷೇತ್ರಗಳಲ್ಲಿ ಕಾಂಗ್ರೆಸ್ 135 ಕ್ಷೇತ್ರಗಳಲ್ಲಿ, ಜೆಡಿಎಸ್ 19 ಕ್ಷೇತ್ರಗಳಲ್ಲಿ ಪಕ್ಷೇತರರು ಎರಡು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಒಬ್ಬರು, ಸರ್ವೋದಯ ಪಕ್ಷದಿಂದ ಒಬ್ಬರು ಗೆಲುವು ಸಾಧಿಸಿದ್ದಾರೆ. ಈ ಮೂಲಕ 224 ಕ್ಷೇತ್ರಗಳಲ್ಲಿ 223 ಕ್ಷೇತ್ರಗಳ ಫಲಿತಾಂಶ ಹೊರ ಬಿದ್ದಿದಿದೆ. ಈ ಬೆನ್ನಲ್ಲೆ ಸಿಎಂ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಿದ್ದಾರೆ.