ಬಂಟ್ವಾಳ: ಹಳೆಯ ವಿಚಾರವಾಗಿ ಮಾತನಾಡಲು ಕರೆದು ಪರಿಚಿತ ವ್ಯಕ್ತಿ ತಲ್ವಾರ್‌ನಿಂದ ದಾಳಿ ಮಾಡಿದ ಪರಿಣಾಮ ಯುವಕನ ಕೈ ತುಂಡಾಗಿರುವ ಘಟನೆ ಬಂಟ್ವಾಳ ಎಂಬಲ್ಲಿ ನಡೆದಿದೆ.
ಶನಿವಾರ ತಡೆರಾತ್ರಿ ನಡೆದಿರುವ ಈ ಘಟನೆಯಲ್ಲಿ ಬಂಟ್ವಾಳದ ಶಿವರಾಜ್ ಎಂಬಾತ ಕೈ ಕಳೆದುಕೊಂಡಿರುವ ಯುವಕನಾಗಿದ್ದು, ಸಂತೋಷನ್ ಎಂಬ ವ್ಯಕ್ತಿ ಕೃತ್ಯವೆಸಗಿರುವ ಆರೋಪ ಕೇಳಿಬಂದಿದೆ.
ಪರಿಚಿತನಿಂದ ಬಂಟ್ವಾಳದ ಶಿವರಾಜ್ ಎಂಬಾತನಿಗೆ ನಿನ್ನೆ ರಾತ್ರಿ ಕರೆಯೊಂದು ಬಂದಿದೆ. ನಿನ್ನಲ್ಲಿ ಮಾತನಾಡಲಿಕ್ಕಿದೆ, ಬರ್ತಿಯಾ ಎಂದು ಕೇಳಿದ್ದಾನೆ . ಈಗ ಏನು ಮಾತಾಡ್ಲಿಕ್ಕುಂಟು, ನಾಳೆ ಬರ್ತೇನೆ ಎಂದು ಶಿವರಾಜ್ ಹೇಳಿದ್ದಾನೆ. ಆದರೂ ಬಿಡದ ಪರಿಚಿತ ಸಂತೋಷ್, ಬಂಟ್ವಾಳದ ಅರ್ಬಿಗುಡ್ಡೆ ಬಳಿಯ ಅಂಗಡಿ ಬಳಿ ಬಾ ಎಂದಿದ್ದಾನೆ.
ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಗೆ ಹೋದ ಶಿವರಾಜ್ ಬಳಿ ಯಾವುದೋ ಹಳೇ ವಿಚಾರದ ಕುರಿತು ಪ್ರಸ್ತಾಪಿಸಿದ್ದ ಸಂತೋಷ್‌ಗೆ ಈಗ್ಯಾಕೆ ಅದೆಲ್ಲಾ ಎಂದು ಶಿವರಾಜ್ ಪ್ರಶ್ನಿಸಿದ್ದಾರೆ. ಹೀಗೆ ಮಾತನಾಡುತ್ತಿರಬೇಕಾದರೆ ಕೂಡಲೇ ಸಣ್ಣ ತಲವಾರಿನಿಂದ ಸಂತೋಷ್ ದಾಳಿ ಮಾಡಿದ್ದಾನೆ. ಕೈ ಅಡ್ಡ ಹಿಡಿದ ಕಾರಣ ಶಿವರಾಜ್ ಕೈ ಕಟ್ ಆಗಿ ನೆಲಕ್ಕೆ ಬಿದ್ದಿದೆ.
ಬಳಿಕ ಅಲ್ಲಿಂದ ಕಾಲ್ಕಿತ್ತಿರುವ ಆರೋಪಿ ಸಂತೋಷ್ ಪತ್ತೆಗಾಗಿ ಪೊಲೀಸರು ಹುಡುಕುತ್ತಿದ್ದಾರೆ. ಕಟ್ ಆದ ಕೈ ಹಿಡಿದುಕೊಂಡೇ ಸ್ನೇಹಿತರಿಗೆ ಕರೆ ಮಾಡಿ ಶಿವರಾಜ್ ಆಸ್ಪತ್ರೆಗೆ ಸೇರಿದ್ದಾನೆ.
ನಿನ್ನೆ ಮಧ್ಯರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಗಾಯಾಳು ಶಿವರಾಜ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮನೆಯಲ್ಲಿ ಬಡತನ ಇದ್ದರೂ ಈತ ಸದ್ಯಕ್ಕೆ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ ಎಂದು ಗೊತ್ತಾಗಿದೆ.
ಈ ಕುರಿತು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಘಟನೆಯ ವಿವರ ಹೀಗಿದೆ. ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದ ಶಿವರಾಜ್ ಇತ್ತೀಚೆಗೆ ಅವಧಿ ಮುಗಿದ ಕಾರಣ ಮನೆಯಲ್ಲೇ ಇದ್ದರು.
ಶನಿವಾರ ಮಧ್ಯರಾತ್ರಿ ಇವರಿಗೆ ಸಂತೋಷ್ ಕರೆ ಮಾಡಿದ್ದು, ಪರಿಚಿತನೇ ಆದ ಕಾರಣ, ನಿನ್ನಲ್ಲಿ ಮಾತನಾಡಲು ಇದೆ ಎಂದಿದ್ದಾನೆ. ನಾನು ಈಗ ಬರುವುದಿಲ್ಲ ಎಂದರೂ, ಮತ್ತೆ ಒತ್ತಾಯ ಮಾಡಿ, ಅರ್ಬಿಗುಡ್ಡೆಯ ಗಣೇಶ್ ಸ್ಟೋರ್ಸ್ ಅಂಗಡಿ ಹತ್ತಿರ ಬಾ ಎಂದು ಹೇಳಿದ್ದಾನೆ.
ಅದರಂತೆ ಶಿವರಾಜ್ ಕುಲಾಲ್ ಅಲ್ಲಿ ಹೋಗಿದ್ದು, ಈ ಸಂದರ್ಭ ವೈಯಕ್ತಿಕ ವಿಚಾರವೊಂದನ್ನು ಮಾತನಾಡಲು ಆರಂಭಿಸಿದ್ದಾನೆ. ಈ ಸಂದರ್ಭ ಮಾತು ತಾರಕಕ್ಕೇರಿದೆ. ಇದರಿಂದ ರೊಚ್ಚಿಗೆದ್ದ ಸಂತೋಷ್ ಸಣ್ಣ ತಲವಾರಿನಿಂದ ಶಿವರಾಜ್ ಅವರ ಕುತ್ತಿಗೆಯ ಎಡಬದಿಗೆ ಬಲವಾಗಿ ಬೀಸಿದ್ದಾನೆ.
ಮತ್ತೆ ಬಲವಾಗಿ ದಾಳಿ ಮಾಡಿದ್ದು, ಈ ಸಂದರ್ಭ ಶಿವರಾಜ್ ಎಡಕೈಯನ್ನು ಅಡ್ಡ ಹಿಡಿದಿದ್ದಾನೆ. ಆ ಸಂದರ್ಭ ಎಡಗೈ ಮಣಿಗಂಟಿಗೆ ತಲವಾರು ದಾಳಿ ಮಾಡಲಾಗಿದ್ದು, ಕೈ ತುಂಡಾಗಿ ನೆಲಕ್ಕೆ ಬಿದ್ದಿದೆ. ಇದನ್ನು ನೋಡಿ ಭಯಭೀತನಾದ ಆರೋಪಿ ಸಂತೋಷ್ ಅಲ್ಲಿಂದ ಓಡಿಹೋಗಿದ್ದಾನೆ.
ಶಿವರಾಜ್ ಗೆಳೆಯ ಧರ್ಮೇಶ್ ಮತ್ತು ತನ್ನ ತಮ್ಮನನ್ನು ಸ್ಥಳಕ್ಕೆ ಕರೆಯಿಸಿ, ಚಿಕಿತ್ಸೆಗೆಂದು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಮತ್ತು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಯಕ್ತಿಕ ವಿಚಾರದ ಸಂಬಂಧ ಹಗೆತನವನ್ನು ಇಟ್ಟುಕೊಂಡು ಕೊಲೆ ಮಾಡುವ ಉದ್ದೇಶದಿಂದ ತನ್ನನ್ನು ಕರೆದು, ತಲವಾರಿನಿಂದ ದಾಳಿ ಮಾಡಲಾಗಿದೆ ಎಂದು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.