ಕೊಯಮತ್ತೂರು (ತಮಿಳುನಾಡು) : ಕೊಯಮತ್ತೂರು ಜಿಲ್ಲೆಯ ತೊಪ್ಪಂಪಟ್ಟಿ ಬಳಿಯ ಕುರುಡಂಪಾಳ್ಯಂನಲ್ಲಿರುವ ಸಿಆರ್‌ಪಿಎಫ್ ಕೇಂದ್ರೀಯ ತರಬೇತಿ ಕಾಲೇಜಿನಲ್ಲಿ ಶನಿವಾರ ಮಧ್ಯಾಹ್ನ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಕಾನ್‌ಸ್ಟೆಬಲ್ ಒಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತನನ್ನು ತೂತುಕುಡಿ ಜಿಲ್ಲೆಯ ಪೆರುಮಾಳ್ಕುಲಂ ಮೂಲದ ಜಗನ್ (32) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಜಗನ್ 2ನೇ ಬಾರಿಗೆ ಮದುವೆಯಾದ ನಂತರ ಕೌಟುಂಬಿಕ ಸಮಸ್ಯೆ ಪ್ರಾರಂಭವಾಯಿತು. ಆದರೆ, ಅವರ ಮೊದಲ ಹೆಂಡತಿಯೊಂದಿಗೆ ವಿಚ್ಛೇದನದ ಪ್ರಕರಣವು ಮಧ್ಯಂತರವಾಗಿತ್ತು.
ಪೊಲೀಸರ ಪ್ರಕಾರ, ಜಗನ್ ಐಎನ್‌ಎಸ್‌ಎಎಸ್ (ಇಂಡಿಯನ್ ಸ್ಮಾಲ್ ಆರ್ಮ್ಸ್ ಸಿಸ್ಟಮ್) ರೈಫಲ್ ಬಳಸಿ ಗುಂಡು ಹಾರಿಸಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಎರಡು ಗುಂಡುಗಳು ಅವನ ಕುತ್ತಿಗೆಯನ್ನು ಹೊಕ್ಕಿದ್ದವು. ಘಟನೆ ನಡೆದ ಕೂಡಲೇ ಪೆರಿಯನಾಯಕನಪಾಳ್ಯಂ ಡಿಎಸ್‌ಪಿ ನಮಚಿವಾಯಂ, ತುಡಿಯಲೂರು ಇನ್ಸ್‌ಪೆಕ್ಟರ್ ರತಿನಕುಮಾರ್ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲದೆ, ಪೊಲೀಸರು ರೈಫಲ್ ಅನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ಸಹ ದಾಖಲಿಸಿದ್ದಾರೆ. ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ.