ಮಂಗಳೂರು: ಮಂಗಳೂರು ನಗರಕ್ಕೆ ಮನಪಾದಿಂದ ಸರಬರಾಜಾಗುವ ನೀರು ಎರಡು ದಿನಗಳ ಕಾಲ ಸ್ಥಗಿತವಾಗಲಿದೆ. ಜೂನ್ 2ರ ಬೆಳಗ್ಗೆ 6ರಿಂದ ಜೂನ್ 4ರ ಬೆಳಗ್ಗೆ 6ರವರೆಗೆ ನಗರದ ಹಲವು ಕಡೆಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ತುಂಬೆ – ಬೆಂದೂರ್‌ವೆಲ್ ಪಣಂಬೂರು 1000 ಎಂಎಂ ವ್ಯಾಸ ಕೊಳವೆಯನ್ನು ಅಡ್ಯಾರ್ ಕಟ್ಟೆಯ ಬಳಿ ಬಲಪಡಿಸುವ ಕಾಮಗಾರಿ ನಡೆಯಲಿದೆ. ಅದೇ ರೀತಿ ಕೊಟ್ಟಾರಚೌಕಿ ಬಳಿ ಕೆಯುಐಡಿಎಫ್‌ಸಿ ವತಿಯಿಂದ 900 ಎಂಎಂ ವ್ಯಾಸ ಕೊಳವೆ ಮರುಜೋಡಣೆ ಕಾಮಗಾರಿ ಇರುವುದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ನಗರದ ಬೆಂದೂರ್‌ವೆಲ್ ಲೋ ಲೆವೆಲ್ ಪ್ರದೇಶಗಳಾದ ಪಿವಿಎಸ್, ಲೇಡಿಹಿಲ್, ಬಂದರು, ಬಿಜೈ, ಸೂಟರ್‌ಪೇಟೆ, ಮೇರಿಹಿಲ್, ಪಚ್ಚನಾಡಿ, ಅಶೋಕನಗರ, ದೇರೆಬೈಲ್, ಕೊಡಿಯಾಲಬೈಲು, ಕದ್ರಿ, ನಾಗುರಿ, ಸುರತ್ಕಲ್, ಕಾಟಿಪಳ್ಳ, ಕೂಳೂರು, ಜಲ್ಲಿಗುಡ್ಡೆ, ಕೋಡಿಕಲ್ ಭಾಗಶಃ, ಕಾನ, ಬಾಳಾ, ಕುಳಾಯಿ, ಮುಕ್ಕ, ಪಂಬೂರು ಮುಂತಾದ ಪ್ರದೇಶಗಳಲ್ಲಿ ಸಂಪೂರ್ಣವಾಗಿ ನೀರು ಸರಬರಾಜು ನಿಲ್ಲಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.