ಒಡಿಶಾದ ಬಾಲಸೋರ್ ನಲ್ಲಿ ಭೀಕರ ರೈಲು ಅಪಘಾತ ಸಂಭವಿಸುವ ಕೆಲ ನಿಮಿಷಗಳ ಮೊದಲು ರೈಲು ತಪ್ಪಾದ ಟ್ರ್ಯಾಕ್ ನಲ್ಲಿ ಸಾಗಿದ್ದೇ ಕಾರಣವಿರಬಹುದೆಂದು ರೈಲ್ನೆ ಸಿಗ್ನಲಿಂಗ್ ಕಂಟ್ರೋಲ್ ರೂಂನ ಪ್ರಾಥಮಿಕ ವರದಿ ತಿಳಿಸಿದೆ.
ಕೋರಮಂಡಲ್ ಎಕ್ಸ್ ಪ್ರೆಸ್ ರೈಲು ಅಫಘಾತದಲ್ಲಿ 238 ಮಂದಿ ಸಾವನ್ನಪ್ಪಿದ್ದು, 900 ಮಂದಿ ಗಾಯಗೊಳ್ಳಲು ಕಾರಣವಾದ ದುರಂತಕ್ಕೆ ಮಾನವ ದೋಷ (ಹ್ಯೂಮನ್ ಎರರ್) ಕಾರಣ ಎಂದು ತಿಳಿದುಬಂದಿದೆ.
ಖಚಿತವಾಗಿ ಹೇಳುವುದಾದರೆ ಸಂಪೂರ್ಣ ಪರೀಕ್ಷೆಯ ನಂತರವೇ ಅಪಘಾತದ ಕಾರಣವನ್ನು ಗುರುತಿಸಲಾಗುತ್ತದೆ.
ರೈಲ್ವೆಯ ಖರಗ್‌ಪುರ ವಿಭಾಗದ ಸಿಗ್ನಲಿಂಗ್ ಕಂಟ್ರೋಲ್ ರೂಮ್‌ನ ವೀಡಿಯೊ ಪ್ರಕಾರ, ಚೆನ್ನೈಗೆ ಹೋಗುವ ಕೋರಮಂಡಲ್ ಎಕ್ಸ್ ಪ್ರೆಸ್ ಶುಕ್ರವಾರ ಸಂಜೆ 6.55 ಕ್ಕೆ ಬಹಾನಗರ್ ಬಜಾರ್ ನಿಲ್ದಾಣವನ್ನು ದಾಟಿದ ನಂತರ ಮುಖ್ಯ ಮಾರ್ಗದ ಬದಲಿಗೆ ಗೂಡ್ಸ್ ರೈಲು ನಿಲುಗಡೆ ಮಾಡಿದ ಲೂಪ್ ಲೈನ್ ನಲ್ಲಿ ಸಾಗಿತು ಎಂದು ಹಿರಿಯ ರೈಲ್ವೆ ಅಧಿಕಾರಿ ಹೇಳಿದ್ದಾರೆ.
ಗಂಟೆಗೆ ಸುಮಾರು 127 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಕೋರಮಂಡಲ್ ಎಕ್ಸ್ ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಮುಖ್ಯ ಮಾರ್ಗದಲ್ಲಿ ಹಳಿ ತಪ್ಪಿದೆ. ಈ ಘರ್ಷಣೆಯ ಕೆಲವೇ ನಿಮಿಷಗಳಲ್ಲಿ ಹೌರಾಕ್ಕೆ ಹೋಗುವ ಯಶವಂತನಗರ ಎಕ್ಸ್ ಪ್ರೆಸ್ ಎದುರು ಭಾಗದಿಂದ ಬರುತ್ತಿದ್ದ ಕೋರಮಂಡಲ್ ಎಕ್ಸ್ ಪ್ರೆಸ್‌ಗೆ ಡಿಕ್ಕಿ ಹೊಡೆದಿದೆ ಎಂದು ಎಂದು ರೈಲ್ವೆ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದುರಂತ ಹೇಗೆ ಸಂಭವಿಸಿತು ಮತ್ತು ಏಕೆ ಸಂಭವಿಸಿತು ಎಂಬುದು ರೈಲ್ವೆ ಮಂಡಳಿಯು ಆದೇಶಿಸಿದ ವಿವರವಾದ ತನಿಖೆಯಲ್ಲಿ ಕಂಡುಬರುತ್ತದೆ. ಆದರೆ ಮೇಲ್ನೋಟಕ್ಕೆ ಇದು ಮಾನವ ದೋಷ ಎಂದು ತೋರುತ್ತದೆ ಎಂದು ಅಧಿಕಾರಿ ಹೇಳಿದರು.
ಅಧಿಕಾರಿಯ ಪ್ರಕಾರ 1995 ರಲ್ಲಿ ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಮೂರು ರೈಲುಗಳು ಡಿಕ್ಕಿ ಹೊಡೆದು ಇದೇ ರೀತಿಯ ಅಪಘಾತ ಸಂಭವಿಸಿತ್ತು. ಆ ಅಪಘಾತದಲ್ಲಿ ಸುಮಾರು 350 ಜನರು ಸಾವನ್ನಪ್ಪಿದ್ದರು. ರಕ್ಷಣಾ ಕಾರ್ಯಾಚರಣೆ ಮೂರು ದಿನಗಳ ಕಾಲ ನಡೆದಿತ್ತು.