ಬಂಟ್ವಾಳ : ಮನೆಯಿಂದ ನಾಪತ್ತೆಯಾಗಿದ್ದ ಬಂಟ್ವಾಳದ ನಿವಾಸಿ ನೇಹಾ ಇದೀಗ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಬೆಂಗಳೂರಿಗೆ ಹೋಗುವುದಾಗಿ ಮೆಸೇಜ್ ಮಾಡಿ ನಾಪತ್ತೆಯಾಗಿದ್ದ ನೇಹಾ ಕುರಿತಂತೆ ಬಂಟ್ವಾಳ ಠಾಣೆಯಲ್ಲಿ ಆಕೆಯ ಅಣ್ಣ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಬೈಪಾಸ್ ಬಿ.ಕಸಬಾ ಗ್ರಾಮದ ಲೆಕ್ಕಸಿರಿ ಪಾದೆ ನಿವಾಸಿ ದಿ.ರಮೇಶ್ ಸಾಲಿಯಾನ್ ಅವರ ಪುತ್ರಿ ಕುಮಾರಿ ನೇಹಾ ಅವರು ನಾಪತ್ತೆಯಾಗಿ ಇದೀಗ ಪತ್ತೆಯಾದ ಯುವತಿಯಾಗಿದ್ದಾಳೆ.
ಆಕೆಯ ಅಣ್ಣ ನೀಡಿದ ದೂರಿನಂತೆ ನೇಹಾಗೆ ಮದುವೆ ಮಾಡುವ ಬಗ್ಗೆ ಸಂಬಂಧ ಹುಡುಕುವ ವೇಳೆ ನೇಹಾ ನಾನು ಸದ್ಯ ಮದುವೆ ಆಗುವುದಿಲ್ಲ ವಿದ್ಯಾಭ್ಯಾಸ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದ್ದಳು. ಈಕೆ ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಅಲ್ಲಿಗೆ ಎಂದು ಮನೆಯಿಂದ ಹೋದವಳು ಮನೆಗೆ ವಾಪಾಸು ಬರದೆ ನಾಪತ್ತೆಯಾಗಿದ್ದಳು.
ಅದೇ ದಿನ ಈಕೆಯ ಚಿಕ್ಕಮ್ಮಳ ಮೊಬೈಲ್ ಗೆ ಮೆಸೇಜ್ ಮಾಡಿ ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ನಾನು ಬೆಂಗಳೂರಿಗೆ ಹೋಗುವುದಾಗಿ ತಿಳಿಸಿದ್ದಳು. ಇದಾದ ಬಳಿಕ ಎರಡು ಪತ್ರ ಬರೆದಿದ್ದು ಅದರಲ್ಲಿ ನಾನು ಬೆಂಗಳೂರಿನಲ್ಲಿರುವುದಾಗಿ ತಿಳಿಸಿದ್ದಳು. ಎರಡು ಪತ್ರ ಕಳುಹಿಸಿದ ಬಳಿಕ ಮೊಬೈಲ್ ಕೂಡ ಸ್ವಿಚ್ ಆಪ್ ಆಗಿದ್ದು, ಮನೆಯವರ ಜೊತೆ ಯಾವುದೇ ಸಂಪರ್ಕ ಮಾಡಿರಲಿಲ್ಲ. ಈ ಕಾರಣಕ್ಕಾಗಿ ಈಕೆಯ ಸಹೋದರ ಕಾಣೆಯಾಗಿದ್ದಾಳೆ ಎಂದು ಪೋಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ನೇಹಾ ನಿನ್ನೆ ನೇರವಾಗಿ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಹಾಜರಾಗಿದ್ದಾಳೆ.
ಅಲ್ಲದೆ ಪೋಲೀಸರಿಗೆ ಹೇಳಿಕೆಯೊಂದನ್ನು ನೀಡಿದ್ದಾಳೆ. ನಾನು ಸ್ವ ಇಚ್ಛೆಯಿಂದ ಮನೆ ಬಿಟ್ಟು ಹೋಗಿದ್ದು, ನನಗೆ ನನ್ನ ಮನೆಯವರೊಂದಿಗೆ ಹೋಗಲು ಇಚ್ಚೆ ಇರುವುದಿಲ್ಲ. ನಾನು ಮುಂದಕ್ಕೆ ವೃತ್ತಿಯೊಂದಿಗೆ ವಿದ್ಯಾಭ್ಯಾಸ ಮುಂದುವರೆಸಲು ಹಾಗೂ ಬದುಕಲು ನಿಶ್ವಯಿಸಿದ್ದು, ಅ ಉದ್ದೇಶದಿಂದ ನಾನು ಉಡುಪಿಯ ಅಜೆಕಾರು ಕುಂಜಿಬೆಟ್ಟು ಎಂಬಲ್ಲಿರುವ ಶ್ರೀ ದುರ್ಗಾ ಮಹಿಳೆಯರ ಪಿ.ಜಿಗೆ ತೆರಳಿ ಅಲ್ಲಿಯೇ ವಾಸ್ತವ್ಯ ಇದ್ದು ನನ್ನ ವಿದ್ಯಾಭ್ಯಾಸ ಮುಂದುವರಿಸಲು ಇಚ್ಚಿಸಿರುತ್ತೇನೆ ಎಂದು ತಿಳಿಸಿದ್ದಾಳೆ. ಇವಳು ನೀಡಿದ ಹೇಳಿಕೆಯನ್ನು ಮತ್ತು ನಿರ್ಧಾರವನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಮನೆಯವರಿಗೆ ತಿಳಿಸಿದ್ದು, ಅವಳನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.