ಕೊಟ್ಟಾಯಂ: ಎಂಟು ತಿಂಗಳ ಮಗುವೊಂದು ಹೃದಯಾಘಾತಕ್ಕೆ ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ನಿರ್ಲಕ್ಷ್ಯವನ್ನು ಆರೋಪಿಸಿ ಮಗುವಿನ ಕುಟುಂಬಸ್ಥರು ಆರೋಗ್ಯ ಸಚಿವರಿಗೆ ದೂರು ನೀಡಿದ್ದಾರೆ.
ಘಟನೆ ಹಿನ್ನೆಲೆ: ಮೇ.11 ರಂದು ಕೇರಳದ ಕೊಟ್ಟಾಯಂ ಮನಾರ್ಕಾಡ್ ಮೂಲದ ಎಬಿ – ಜಾನ್ಸಿ ದಂಪತಿಯ 8 ತಿಂಗಳ ಮಗು ಜೋಶ್ ಎಬಿಗೆ ಜ್ವರ ಕಾಣಿಸಿಕೊಂಡ ಕಾರಣ ಮಗುವನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿನ ವಿಭಾಗದ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಮಗುವನ್ನು ಮೇ.29 ರಂದು ಐಸಿಯುಗೆ ದಾಖಲಿಸಿದ್ದಾರೆ. ರಾತ್ರಿ ವೈದ್ಯರು ಇನ್ಫ್ಲಿಕ್ಸಿಮಾಬ್ (infliximab injection) ಚುಚ್ಚು ಮದ್ದನ್ನು ನೀಡಿದ್ದಾರೆ. ಕೆಲ ಸಮಯದ ಬಳಿಕ ಮಗುವಿನ ಉಸಿರಾಟದಲ್ಲಿ ತೊಂದರೆ ಉಂಟಾಗಿದೆ. ಆ ಬಳಿಕ ಮಗುವಿನ ಆರೋಗ್ಯ ಹದಗೆಟ್ಟಿದೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಮಗುವಿಗೆ ಹೃದಯಾಘಾತವಾಗಿದೆ ಎಂದು ಹೇಳಿದ್ದಾರೆ.
ಹೈಡೋಸ್ ಚುಚ್ಚು ಮದ್ದನ್ನು ನೀಡಿದ ಬಳಿಕ ಮಗುವಿನ ಆರೋಗ್ಯದ ನಿಗಾವಿಡಲು ಯಾವ ವೈದ್ಯರು ಬರಲಿಲ್ಲ. ಚುಚ್ಚು ಮದ್ದು ಹೃದಯಕ್ಕೆ ಪರಿಣಾಮವಿದ್ದರೂ ಅದನ್ನು ಆಸ್ಪತ್ರೆಯವರು ಕಡೆಗಣಿಸಿದ್ದಾರೆ. ಇದರಿಂದ ಮಗುವಿಗೆ ಹೃದಯಾಘಾತವಾಗಿದೆ ಎಂದು ಆಸ್ಪತ್ರೆಯ ನಿರ್ಲಕ್ಷ್ಯವನ್ನು ಆರೋಪಿಸಿ ಆರೋಗ್ಯ ಸಚಿವರಿಗೆ ಮೃತ ಮಗುವಿನ ಪೋಷಕರು ದೂರು ನೀಡಿದ್ದಾರೆ.
ಮಗುವಿಗೆ ಗಂಭೀರ ಹೃದ್ರೋಗವಿತ್ತು, ಆಸ್ಪತ್ರೆಯಲ್ಲಿ ಯಾವುದೇ ವೈದ್ಯಕೀಯ ಲೋಪವಾಗಿಲ್ಲ. ಒಂದು ವೇಳೆ ಈ ಬಗ್ಗೆ ಅಧಿಕೃತವಾಗಿ ದೂರು ದಾಖಲಾದರೆ ನಾನು ವಿವರವಾಗಿ ಮಾಹಿತಿಯನ್ನು ನೀಡುತ್ತೇನೆ ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.