ರಾಮನಗರ: ಹೆದ್ದಾರಿಯಲ್ಲಿ ಪೊಲೀಸರು ಸಮವಸ್ತ್ರದಲ್ಲಿ ಕಾಣಿಸುತ್ತಿಲ್ಲ. ನಮ್ಮ ಸಿಬ್ಬಂದಿ ಕಂಡರೆ, ವಾಹನ ಸವಾರರಿಗೆ ಒಂದು ಭಯ ಇರುತ್ತದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು- ಮೈಸೂರು ದಶಪಥ ಎಕ್ಸ್‌ಪ್ರೆಸ್ ಹೆದ್ದಾರಿ ಅಪಘಾತದ ಸ್ಥಳಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ, ಅಧಿಕಾರಿಗಳಿಗೆ ಈ ನಿರ್ದೇಶನ ನೀಡಿದರು.
ಬೆಂಗಳೂರಿನಿಂದ ಬೆಳಗಾವಿವರೆಗೆ ಹೋದರೂ ಒಬ್ಬ ಸಿಬ್ಬಂದಿ ಸಹ ಸಮವಸ್ತ್ರದಲ್ಲಿ ಕಾಣುವುದಿಲ್ಲ. ಸಿಬ್ಬಂದಿ ಕೇವಲ ರಿಫ್ಲೆಕ್ಟ್ ಜಾಕೆಟ್ ಹಾಕಿಕೊಂಡು ಇದ್ದರೆ ಸಾಕು. ಜನ ಭಯದಿಂದ ವಾಹನದ ವೇಗ ತಗ್ಗಿಸುತ್ತಾರೆ ಎಂದರು.
ದಾವಣಗೆರೆಯಲ್ಲಿ ನಾನು ಎಸ್ ಪಿ ಇದ್ದಾಗ ಹೆದ್ದಾರಿಯಲ್ಲಿ ಪಹರೆ ಮಾಡಿಯೇ, ಶೇ 40ರಷ್ಟು ಅಪಘಾತ ತಗ್ಗಿಸಿದ್ದೆವು. ಎಲ್ಲಾ ಹೆದ್ದಾರಿಗಳಲ್ಲಿ ಗಸ್ತು ಆರಂಭಿಸಬೇಕು ಎಂದು ಸೂಚಿಸಿದರು.
ಹೆದ್ದಾರಿ ಪಹರೆಗೆ ನಿಯೋಜಿಸಿರುವ ಗಸ್ತು ವಾಹನಗಳನ್ನು ಪರಿಶೀಲಿಸಿದ ಅವರು, ಅಪಘಾತ ತಡೆಗೆ ಹೆದ್ದಾರಿ ವ್ಯಾಪ್ತಿಯ ಪೊಲೀಸ್ ಠಾಣೆಗಳ ಸಿಬ್ಬಂದಿ ಕೈಗೊಂಡಿರುವ ಕ್ರಮಗಳನ್ನು ವಿಚಾರಿಸಿದರು. ಅಪಘಾತದ ಮಾಹಿತಿ ಪುಸ್ತಕವನ್ನು ಪರಿಶೀಲಿಸಿದರು.
ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ, ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ರಾಹುಲ್ ಹಾಗೂ ಸ್ಥಳೀಯ ಪೊಲೀಸರು ಇದ್ದರು.