ಮಂಗಳೂರು: ಅಪ್ರಾಪ್ತರಿಗೆ ವಾಹನ ನೀಡಿದ್ದಲ್ಲಿ ಆರ್‌ಸಿ ಓನರ್ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಜೈನ್ ಅವರು ಫೋನ್ ಇನ್ ಕಾರ್ಯಕ್ರಮದಲ್ಲಿ ಬಂದಿರುವ ದೂರೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 31 ಫೋನ್ ಕರೆಗಳನ್ನು ಪೊಲೀಸ್ ಕಮಿಷನರ್ ಸ್ವೀಕರಿಸಿದರು. ಬಹಳಷ್ಟು ಟ್ರಾಫಿಕ್ ಸಮಸ್ಯೆಗಳ ದೂರುಗಳೇ ಕೇಳಿ ಬಂದಿದೆ. ಅದರಲ್ಲೂ ಹೆಲ್ಮೆಟ್ ರಹಿತ ಚಾಲನೆ, ಅಪ್ರಾಪ್ತರಿಂದ ವಾಹನ ಚಾಲನೆ, ವಾಹನಗಳ ಕರ್ಕಶ ಹಾರ್ನ್, ಬೈಕ್‌ಗಳ ಕರ್ಕಶ ಸೈಲೆನ್ಸರ್‌ಗಳಿಂದ ತೊಂದರೆಗಳಾಗುವ ದೂರುಗಳು ಬಂದಿದೆ. ಈ ಬಗ್ಗೆ ದೂರು ಸ್ವೀಕರಿಸಿದ ಪೊಲೀಸ್ ಕಮಿಷನರ್ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಿತ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಹೆಲ್ಮೆಟ್ ರಹಿತ ಚಾಲನೆ ಹಾಗೂ ಅಪ್ರಾಪ್ತರಿಂದ ವಾಹನ ಚಾಲನೆ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ ಅಪ್ರಾಪ್ತರು ಸೇರಿದಂತೆ ಅವರ ಮನೆಯವರನ್ನು ಠಾಣೆಗೆ ಕರೆದು ಕೌನ್ಸೆಲಿಂಗ್ ಮಾಡಲಾಗುತ್ತದೆ ಎಂದು ಹೇಳಿದರು. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸೀಝ್ ಆದ ವಾಹನಗಳಿಂದ ರಸ್ತೆ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಜೊತೆಗೆ ಈ ವಾಹನಗಳಲ್ಲಿ ಮಳೆಗಾಲದಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗಿ ರೋಗ ಹರಡುವ ಭೀತಿಯಿದೆ ಎಂಬ ದೂರೊಂದು ಬಂದಿತ್ತು. ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಪೊಲೀಸ್ ಕಮಿಷನರ್ ವಾಹನಗಳಲ್ಲಿ ನೀರು ನಿಲುಗಡೆಯಾಗದಂತೆ ಠಾಣಾ ಸಿಬ್ಬಂದಿ ಶುಚಿಗೊಳಿಸುವಂತೆ ಹೇಳಿದರು.