ಬಜ್ಪೆ: ನೀರಿನ ಸಮಸ್ಯೆಯನ್ನು ಪರಿಹರಿಸಿ ಕೊಡುವಂತೆ ಕಂದಾವರ ಪಂಚಾಯತ್ ನ ಮೆಂಬರ್ ಸವಿತಾ ಎಂಬವರಿಗೆ ಯುವತಿಯೊಬ್ಬರು ಮನವಿ ಮಾಡಿದ್ದು, ಆದರೆ ಅವರು ಪುರುಷನೋರ್ವನಿಗೆ ಆ ಯುವತಿಯ ನಂಬರ್ ನೀಡಿ ಕರೆ ಮಾಡಿಸಿ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿ ಬಂದಿದೆ.
ಹೌದು..! ಘಟನೆ ಸಂಬಂಧ ಯುವತಿಯ ಸಹೋದರ ಹಾಗೂ ಸ್ಥಳೀಯರು ಸೇರಿ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ದೂರು ದಾಖಲಿಸಿಕೊಂಡು ತಕ್ಷಣದಲ್ಲಿ ಕ್ರಮಕೈಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಗ್ರಾಮಸ್ಥರು ಪೊಲೀಸ್ ಠಾಣೆ ಬಳಿ ಜಮಾಯಿಸಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.
ಯುವತಿಯ ಸಹೋದರ ಚರಣ್ ಎಂಬವರು ಈ ಬಗ್ಗೆ ಮಾತನಾಡಿದ್ದು, ನಾನು ಮುಂಡಾಲ ಸಮುದಾಯದ ಯುವಕನಾಗಿದ್ದೇನೆ, ನಮ್ಮ ಗ್ರಾಮದಲ್ಲಿ ಹಲವು ಸಮಯಗಳಿಂದಲೂ ನೀರಿನ ಸಮಸ್ಯೆ ಇದೆ. ಇದರ ಬಗ್ಗೆ ನನ್ನ ತಂಗಿ ಪಂಚಾಯತ್ ಸದಸ್ಯೆ ಸವಿತಾ, ಗ್ರಾಮ ಪಂಚಾಯತ್ ಅಧ್ಯಕ್ಷೆ ಹಾಗೂ ಪಿಡಿಓಗೆ ಕರೆ ಮಾಡಿ ತಿಳಿಸಿದ್ದಾಳೆ. ಆದ್ರೆ ಸವಿತಾ ಅವರು, ನನ್ನ ತಂಗಿಯ ನಂಬರ್ ಸುದರ್ಶನ್ ಎಂಬ ವ್ಯಕ್ತಿಯೋರ್ವನಿಗೆ ನೀಡಿದ್ದು, ಆ ವ್ಯಕ್ತಿ ನನ್ನ ತಂಗಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.
ಸುದರ್ಶನ್ ಎಂಬ ವ್ಯಕ್ತಿ ನನ್ನ ತಂಗಿಗೆ ಕರೆ ಮಾಡಿ, “ಸವಿತಾಗೆ ಕರೆ ಮಾಡಿ ಜೋರು ಮಾಡಿದ್ದು ಯಾರು?, ನೀವು ಪಂಚಾಯತ್ ಗೆ ಕಂಪ್ಲೈಂಟ್ ಕೊಡಿ” ಎಂದಿದ್ದಲ್ಲದೇ, ರಾತ್ರಿ ನಿನ್ನ ಮನೆಗೆ ಬರ್ತೇನೆ, ನನಗೆ ಕರೆ ಮಾಡು, ಇಲ್ಲವಾದ್ರೆ ಮನೆಗೆ ಬರುತ್ತೇನೆ ಎಂದು ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.