ಪುತ್ತೂರು: ಪುತ್ತೂರಿನ ಪಡೀಲಿನಲ್ಲಿ ಕಾರ್ಯಾಚರಿಸುತ್ತಿದ್ದ ವಿಶ್ವನಾಥ್ ಎಂಬುವರಿಗೆ ಸೇರಿದ ಬಿ.ಬಿ ಇಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್ ಸೆಂಟರಿನಲ್ಲಿ ಸರ್ಕಾರಿ ದಾಖಲೆಗಳ ನಕಲಿ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಪುತ್ತೂರು ತಾಪಂ ಇಒ ನೇತೃತ್ವದ ತಂಡ ದಾಳಿ ನಡೆಸಿ ನಕಲಿ ದಾಖಲೆ, ನಕಲಿ ಸೀಲ್ ವಶಕ್ಕೆ ಪಡೆದುಕೊಂಡಿದೆ. ಸರ್ಕಾರದಿಂದ ಅನುಮತಿ ಪಡೆದ ಗುತ್ತಿಗೆದಾರರು ಇವರಾಗಿದ್ದು, ಮೆಸ್ಕಾಂನ ಗುತ್ತಿಗೆ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದರು. ವಿದ್ಯುತ್ ಗುತ್ತಿಗೆ ಕಾಮಗಾರಿ ನಿರ್ವಹಿಸುತ್ತಿದ್ದ ಈ ಅಂಗಡಿಯಲ್ಲಿ, ಪುತ್ತೂರು ನಗರಸಭೆ, ಕಡಬ ತಾಲೂಕು ಪಂಚಾಯತ್ ಹಾಗೂ ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತಿಗಳ ಸೀಲ್ ಗಳನ್ನೇ ಹೋಲುವ ನಕಲಿ ಸೀಲ್ ಗಳು ಪತ್ತೆಯಾಗಿವೆ. ದಾಖಲೆ ಪತ್ರಗಳಿಗೆ ಫೋರ್ಜರಿ ಸಹಿ ಹಾಕಿ, ಅದಕ್ಕೆ ನಕಲಿ ಸೀಲ್ ಗಳನ್ನು ಹಾಕಲಾಗುತ್ತಿತ್ತು. ಸಾರ್ವಜನಿಕ ದೂರಿನ ಮೇರೆಗೆ ತಾಪಂ ಇಓ ನವೀನ್ ಭಂಡಾರಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, ಪರಿಶೀಲಿಸಿದಾಗ ವಂಚನೆ ಜಾಲ ಬೆಳಕಿಗೆ ಬಂದಿದೆ.