ಮಂಗಳೂರು: ಕಾನೂನು ವಿದ್ಯಾರ್ಥಿನಿಯ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ವಕೀಲ ಕೆಎಸ್‌ಎನ್ ರಾಜೇಶ್ ವಿರುದ್ಧ ದಾಖಲಾಗಿರುವ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದಂತೆ ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಮಂಗಳೂರು ಮಹಿಳಾ ಠಾಣೆಯ ಪೊಲೀಸರು ದಾಖಲಿಸಿದ ಎಫ್‌ಐಆರ್ ಮತ್ತು 3ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಕೋರಿ ವಕೀಲ ಕೆ.ಎಸ್.ಎನ್ ರಾಜೇಶ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ. ಅತ್ಯಾಚಾರ, ಅತ್ಯಾಚಾರ ಯತ್ನ ಮತ್ತು ಅತ್ಯಾಚಾರಕ್ಕೆ ತಯಾರಿ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ವೇಳೆಯಲ್ಲಿ ಕಂಡು ಬಂದಿದೆ. ತನಿಖಾಧಿಕಾರಿಗಳು ವಶಪಡಿಸಿಕೊಂಡ ಸಿಸಿಟಿವಿ ದೃಶ್ಯಾವಳಿಗಳು, ಆರೋಪಿ ಮತ್ತು ದೂರುದಾರರ ನಡುವೆ ನಡೆದ ಮಾತುಕತೆಯ ವೈಜ್ಞಾನಿಕ ವರದಿಗಳು ಮತ್ತು ಘಟನಾ ಸಂದರ್ಭ ಆರೋಪಿಯ ಉದ್ದೇಶ, ಅತ್ಯಾಚಾರಕ್ಕೆ ಯತ್ನ ಮತ್ತು ಅತ್ಯಾಚಾರ ನಡೆದಿದೆಯೋ ಇಲ್ಲವೋ ಎಂಬ ವಿಷಯಕ್ಕೆ ಸಾಕ್ಷ್ಯ ವಿಚಾರಣೆ ವೇಳೆ ತಿಳಿಯುವುದೆಂದು ಮತ್ತು ನ್ಯಾಯಾಲಯ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿದರೆ ಕಾನೂನು ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲಾದಂತಾಗುತ್ತೆ ಎಂದು ಕೊಟ್೯ ಅಭಿಪ್ರಾಯಪಟ್ಟಿದೆ.